ಬಂದರ್ ನಲ್ಲಿ ವಿಶೇಷ ಕಾರ್ಯಾಚರಣೆ: 25,000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ
ತಿರುವನಂತಪುರಂ: ಮಾದಕವಸ್ತು ನಿಗ್ರಹ ದಳ ಹಾಗೂ ಭಾರತೀಯ ನೌಕಾಪಡೆ ಶನಿವಾರ ಕೇರಳದ ಕೊಚ್ಚಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಬಂದರಿಗೆ ಆಗಮಿಸಿದ ನೌಕೆಯಿಂದ 134 ಚೀಲಗಳಲ್ಲಿ ತುಂಬಿದ್ದ ಮಾದಕ ವಸ್ತು ಪತ್ತೆ ಮಾಡಿತ್ತು.
ಈ ಮಾದಕ ವಸ್ತುವಿನ ಮೌಲ್ಯ ಬರೋಬ್ಬರಿ 25,000 ಕೋಟಿ ರೂ. ಎಂದು ಎನ್‌ಸಿಬಿ ತಿಳಿಸಿದೆ.
ಎನ್‌ಸಿಬಿ ಹಾಗೂ ನೌಕಾಪಡೆ ವಶಪಡಿಸಿಕೊಂಡ ಹೈ ಪ್ಯೂರಿಟಿ ಮೆಥಾಂಪೆಟಮೈನ್‌ನ ಎಣಿಕೆ ಪೂರ್ಣಗೊಂಡಿದೆ.
ಒಟ್ಟು 2,525 ಕೆಜಿ ತೂಕದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದು, ಇದರ ಬೆಲೆಯನ್ನು ಆರಂಭದಲ್ಲಿ 12,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು.
ಆದರೆ ಡ್ರಗ್ಸ್ನ ಗುಣಮಟ್ಟ ಪರಿಶೀಲನೆ ಬಳಿಕ ಇದರ ಬೆಲೆ 25,000 ಕೋಟಿ ರೂ. ನಷ್ಟಿದೆ ಎಂದು ಅಂದಾಜಿಸಲಾಗಿದೆ. ಮಾತ್ರವಲ್ಲದೇ ಇದು ದೇಶದಲ್ಲಿಯೇ ವಶಪಡಿಸಿಕೊಳ್ಳಲಾದ ಅತಿ ದೊಡ್ಡ ಮಾದಕ ವಸ್ತು ಪ್ರಕರಣವಾಗಿ ಹೊರಹೊಮ್ಮಿದೆ.




