March 24, 2026

32 ಸಾವಿರ ಯುವತಿಯರ ಬದಲು 3 ಯುವತಿಯರು:
‘ದಿ ಕೇರಳ ಸ್ಟೋರಿ’ ಚಿತ್ರ ತಂಡದಿಂದ ಮತಾಂತರಗೊಂಡ ಮಹಿಳೆಯರ ಸಂಖ್ಯೆಯಲ್ಲಿ ಬದಲಾವಣೆ

0
Screenshot_20230502-133107_Twitter.jpg

ಕೇರಳ: ಸುಳ್ಳು ಪ್ರತಿಪಾದನೆ ಮೂಲಕ ಸಮಾಜದಲ್ಲಿ ಅಪನಂಬಿಕೆ ಬಿತ್ತಲು ಹೊರಟಿದೆ ಎಂಬ ಆರೋಪ ಹೊತ್ತಿರುವ ‘ದಿ ಕೇರಳ ಸ್ಟೋರಿ’ ಚಿತ್ರ ತಂಡವು ವಿವಾದದ ಬಳಿಕ ತನ್ನ ಪ್ರತಿಪಾದನೆಯಲ್ಲಿ ಬದಲಾವಣೆ ತಂದಿದೆ.

ಈ ಬಗ್ಗೆ ಮಿನಿನಾಯರ್ ಎಂಬ ಮಹಿಳೆ ಟ್ವಿಟರ್ ನಲ್ಲಿ ಬದಲಾವಣೆಯ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಮೊದಲು 32 ಸಾವಿರದಿಂದ ಈಗ ಕೇವಲ 3 ಮಹಿಳೆಯರು ಎಂಬ ಮಹತ್ತರ ಬದಲಾವಣೆಗಳನ್ನು ಚಿತ್ರ ತಂಡವು YouTube ನಲ್ಲಿ ಪ್ರಸರಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ.

32,000 ಯುವತಿಯರು ಮತಾಂತರಗೊಂಡು ಐಎಸ್ ಸೇರಿದ್ದಾರೆ ಎಂದು ಪ್ರತಿಪಾದಿಸಿದ್ದ ಚಿತ್ರತಂಡವು ಟ್ರೇಲರ್‌ನ YouTube ಡಿಸ್ಕ್ರಿಪ್ಷನ್‌ ನಲ್ಲಿ ಬದಲಾವಣೆ ಮಾಡಿದ್ದು, 32 ಸಾವಿರ ಯುವತಿಯರ ಬದಲು 3 ಯುವತಿಯರು ಮತಾಂತರವಾಗಿ ಐಎಸ್‌ ಸೇರಿದ್ದಾರೆ ಎಂದು ಬದಲಾಯಿಸಲಾಗಿದೆ.

ಲವ್ ಜಿಹಾದ್ ಹಿನ್ನೆಲೆ ಇರುವ “ದಿ ಕೇರಳ ಸ್ಟೋರಿ” ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು (ಮಂಗಳವಾರ) ವಜಾ ಮಾಡಿದೆ. ಸಿನಿಮಾ ಸೆನ್ಸಾರ್​ ಮಂಡಳಿಯಿಂದ ಪ್ರಮಾಣಪತ್ರ ಪಡೆದಿದೆ. ಹೀಗಾಗಿ ತಡೆ ನೀಡಲು ಅಸಾಧ್ಯ ಎಂದು ಹೇಳಿದೆ.

ಇಷ್ಟೆಲ್ಲ ವಿವಾದ ಎಬ್ಬಿಸಿರುವ ಈ ಸಿನಿಮಾದಲ್ಲಿ ಇರುವ ಮಾಹಿತಿ ನಿಜವೋ ಸುಳ್ಳೋ ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಇದರಲ್ಲಿನ ಮಾಹಿತಿ ನಿಜ ಎಂದು ಸಾಬೀತು ಮಾಡಿದರೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಮುಸ್ಲಿಂ ಯೂತ್​ ಲೀಗ್​ ಕೇರಳ ರಾಜ್ಯ ಕಮಿಟಿಯು ಘೋಷಿಸಿದೆ.

‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಸುದೀಪ್ತೊ ಸೇನ್ ನಿರ್ದೇಶನ ಮಾಡಿದ್ದಾರೆ. ವಿಫುಲ್ ಶಾ ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಅದಾ ಶರ್ಮಾ ಜೊತೆ ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದಿ ಇದ್ನಾನಿ ಮುಂತಾದವರು ನಟಿಸಿದ್ದಾರೆ. ಮೇ 5ರಂದು ‘ದಿ ಕೇರಳ ಸ್ಟೋರಿ’ ಬಿಡುಗಡೆ ಆಗಲಿದೆ.

Leave a Reply

Your email address will not be published. Required fields are marked *

error: Content is protected !!