November 22, 2024

ಮಂಗಳೂರು: ನಾಳೆ ಮೂಲ್ಕಿಯಲ್ಲಿ ನಡೆಯುವ ಬಿಜೆಪಿ ಬೃಹತ್ ಸಮಾವೇಶದಲ್ಲಿ
ಪ್ರಧಾನಿ ಮೋದಿ ಭಾಗಿ: ಸಂಚಾರದಲ್ಲಿ ಬದಲಾವಣೆ, ಇಲ್ಲಿದೆ ಮಾಹಿತಿ

0

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಗೆ ಆಗಮಿಸಲಿದ್ದು, ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ಭದ್ರತೆ ಹಾಗೂ ಸಂಚಾರ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಸಮಾವೇಶ ಸ್ಥಳದ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕುದೀಪ್ ಕುಮಾರ್ ಜೈನ್ ಹೇಳಿದ್ದಾರೆ.

ಬೆಳಗ್ಗೆ 10:30ರ ನಂತರ ಮೂಲ್ಕಿಯ ಕೊಲ್ನಾಡ್ ನ ಹೆಲಿಪ್ಯಾಡ್ ನಿಂದ ಕಾರ್ಯಕ್ರಮಕ್ಕೆ ಹೋಗುವ ಸ್ಥಳದಲ್ಲಿ ಹಾಗೂ ಹಳೆಯಂಗಡಿ ಜಂಕ್ಷನ್ ಬಳಿಯ ಕಾರ್ನಾಡ್ ಬೈಪಾಸ್ ಬಳಿ ಕಾರ್ಯಕ್ರಮಕ್ಕೆ ಬರುವ ವಾಹನವನ್ನು ಬಿಟ್ಟು ಉಳಿದ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ಸದ್ಯ ಉಡುಪಿ ಕಡೆಯಿಂದ ಮಂಗಳೂರು ಹಾಗೂ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುವವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುವ ಎಲ್ಲ ರೀತಿಯ ವಾಹನಗಳು ಮೂಲ್ಕಿ ವಿಜಯ ಸನ್ನಿಧಿಯ ಬಳಿ ಎಡಕ್ಕೆ ಚಲಿಸಿ ಕಿನ್ನಿಗೋಳಿ, ಕಟೀಲ್‌, ಬಜಪೆ, ಕಾವೂರು ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸಬೇಕು.

ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ಎಲ್ಲ ರೀತಿಯ ವಾಹನಗಳು ಕೆ.ಪಿ.ಟಿ ಜಂಕ್ಷನ್‌ನಲ್ಲಿ ಬಲಕ್ಕೆ ಚಲಿಸಿ ಬೊಂದೇಲ್‌ – ಕಾವೂರು, ಬಜಪೆ, ಕಟೀಲು, ಕಿನ್ನಿಗೋಳಿ – ಮುಲ್ಕಿ ಕಡೆಗೆ ಸಂಚರಿಸಬಹುದು. ಕೂಳೂರು ಜಂಕ್ಷನ್‌ನಿಂದಲೂ ಕಾವೂರು ಮೂಲಕ ಸಂಚರಿಸಬಹುದು. ಸುರತ್ಕಲ್‌ ಕಡೆಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ಹಳೆಯಂಗಡಿ ಜಂಕ್ಷನ್‌ ಬಳಿ ಬಲಕ್ಕೆ ತಿರುಗಿ ಪಕ್ಷಿಕೆರೆ ಎಸ್‌-ಕೋಡಿ ಮಾರ್ಗವಾಗಿ ಮೂಲ್ಕಿ ಮೂಲಕ ಸಂ‌ಚರಿಸಬಹುದು.

ಮೇ 3ರಂದು ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಹಳೆಯಂಗಡಿ ಜಂಕ್ಷನ್‌ನಿಂದ ಮೂಲ್ಕಿ ವಿಜಯ ಸನ್ನಿಧಿವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಎರಡು ಬದಿಯ ರಸ್ತೆಗಳಲ್ಲಿ ಸಭಾ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಇತರೆ ಎಲ್ಲ ವಾಹನ ಸಂಚಾರ ನಿಷೇಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಕೊಲ್ನಾಡು ಜಂಕ್ಷನ್‌ನಿಂದ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಕೆ.ಎಸ್‌. ರಾವ್‌ ನಗರಕ್ಕೆ ಹೋಗುವ ರಸ್ತೆಗಳಲ್ಲಿ ಸಭಾ ಕಾರ್ಯಕ್ರಮಕ್ಕೆ ಬರುವ ವಾಹನ ಹೊರತುಪಡಿಸಿ ಇತರೆ ಎಲ್ಲ ವಾಹನಗಳ ಸಂಚಾರ ನಿಷೇಧಿಸಿದೆ. ತುರ್ತು ಸೇವೆಯ ವಾಹನಗಳಿಗೆ ಸಂಚಾರಕ್ಕೆ ಅವಕಾಶವಿದೆ.

Leave a Reply

Your email address will not be published. Required fields are marked *

error: Content is protected !!