ಮಂಗಳೂರು: ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ನಗರದಲ್ಲಿ ಪೊಲೀಸರಿಂದ ಪಥ ಸಂಚಲನ
ಮಂಗಳೂರು: ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್‌ರ ನೇತೃತ್ವದಲ್ಲಿ ನಗರದಲ್ಲಿ ಪಥ ಸಂಚಲನ ನಡೆಯಿತು.
ನಗರದ ನೆಹರೂ ಮೈದಾನದಿಂದ ಆರಂಭಗೊಂಡ ಪಥಸಂಚಲನ ಹ್ಯಾಮಿಲ್ಟನ್ ಸರ್ಕಲ್, ರಾವ್ ಆ್ಯಂಡ್ ರಾವ್ ಸರ್ಕಲ್, ಕ್ಲಾಕ್ ಟವರ್, ಕೆ.ಎಸ್.ರಾವ್ ರಸ್ತೆಯ ಮೂಲಕ ಮಂಜೇಶ್ವರ ಗೋವಿಂದ ಪೈ ವೃತ್ತದವರೆಗೆ ಸಾಗಿತು. ಸಿಆರ್‌ಪಿಎಫ್, ಸಿಐಎಸ್‌ಎಫ್, ಸಿಎಆರ್, ಸ್ಥಳೀಯ ಪೊಲೀಸರ ಸಹಿತ 280 ಮಂದಿ ಅಧಿಕಾರಿ, ಸಿಬ್ಬಂದಿಯು ಪಾಲ್ಗೊಂಡಿದ್ದರು.
ಎಡಿಜಿಪಿ ಅಲೋಕ್ ಕುಮಾರ್‌ರೊಂದಿಗೆ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶುಕುಮಾರ್ ಮತ್ತಿತರ ಅಧಿಕಾರಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಪಥಸಂಚಲನಕ್ಕೂ ಮೊದಲು ಎಡಿಜಿಪಿ ಅಲೋಕ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚುನಾವಣಾ ಸಂದರ್ಭ ಮಾಡಬೇಕಾದ ಹೆಚ್ಚುವರಿ ಭದ್ರತೆ, ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆ-ಸೂಚನೆಗಳನ್ನು ನೀಡಿದರು.




