February 3, 2026

ಮಂಗಳೂರು: ಪಾರ್ಟ್‌ಟೈಂ ಕೆಲಸದ ಹೆಸರಿನಲ್ಲಿ 1.14 ಲಕ್ಷ ರೂ. ವಂಚನೆ

0
IMG-20230416-WA0019.jpg

ಮಂಗಳೂರು: ಪಾರ್ಟ್‌ಟೈಂ ಕೆಲಸದ ಕುರಿತು ಟೆಲಿಗ್ರಾಂ ಖಾತೆಯಲ್ಲಿ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 1,14,901 ರೂ. ಮೋಸ ಹೋಗಿರುವ ಕುರಿತು ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲ್ಗುಣಿ ಎಂಬ ಹೆಸರಿನಿಂದ ಪಾರ್ಟ್‌ ಟೈಂ ಕೆಲಸದ ಬಗ್ಗೆ ಸಂದೇಶ ಬಂದಿದ್ದು, ಈ ಕುರಿತು ವಿಚಾರಿಸಿದಾಗ, ಆನ್‌ಲೈನ್‌ ಮೂವಿ ಟಿಕೆಟ್‌ ರೇಟಿಂಗ್‌ ಉದ್ಯೋಗ ಎಂದು ತಿಳಿಸಿದ್ದಾರೆ.

ಇನ್ನು ಲಿಂಕ್‌ ಕಳುಹಿಸಿ ಆ್ಯಪ್‌ ಇನ್‌ಸ್ಟಾಲ್‌ ಮಾಡಿ ಖಾತೆ ತೆರೆದು ಅದರಲ್ಲಿ ಪ್ರಸಾರವಾಗುವ ವೀಡಿಯೋ ನೋಡಿ ರೇಟಿಂಗ್‌ ಹಾಕಿ ಕಮೀಷನ್‌ ಹಣ ಪಡೆದುಕೊಳ್ಳಬಹುದು ಎಂದು ಆರೋಪಿಗಳು ತಿಳಿಸಿದ್ದು, ಅದರಂತೆ ಲಿಂಕ್‌ ಕಳುಹಿಸಿದ್ದು, ಅದರಲ್ಲಿದ್ದ ಆ್ಯಪನ್ನು ಮೊಬೈಲ್‌ ಮೂಲಕ ಇನ್‌ಸ್ಟಾಲ್‌ ಮಾಡಿ ಖಾತೆಯನ್ನು ತೆರೆದು ವೀಡಿಯೋಗಳನ್ನು ನೋಡಿ ಅದಕ್ಕೆ ರೇಟಿಂಗ್‌ ನೀಡಿದ್ದಾರೆ. ಆರಂಭದಲ್ಲಿ 1 ಸಾವಿರ ರೂ. ಕಮಿಷನ್‌ ಲಭಿಸಿದೆ.

ಬಳಿಕ ಪಾರ್ಟ್‌ ಟೈಮ್‌ ಜಾಬ್‌ ಮುಂದುವರಿಸಲು 10,500 ರೂ. ಪಾವತಿಸುವಂತೆ ಟೆಲಿಗ್ರಾಂ ಮೂಲಕ ಸಂದೇಶ ಬಂದಿದೆ. ಅದರಂತೆ ಅವರು ಕಳುಹಿಸಿದ ಖಾತೆ ಸಂಖ್ಯೆಗೆ 10,500 ರೂ. ಪಾವತಿಸಿದ್ದಾರೆ. ಅದೇ ದಿನ ಹೆಚ್ಚಿನ ಕಮಿಷನ್‌ ಪಡೆಯಬೇಕಾದಲ್ಲಿ 29,936 ರೂ. ಪಾವತಿಸುವಂತೆ ಸಂದೇಶ ಬಂದಿದ್ದು, ಕಮಿಷನ್‌ ಆಸೆಯಿಂದ ಆ ಮೊತ್ತವನ್ನೂ ಜಮಾ ಮಾಡಿರುತ್ತಾರೆ. ಮರುದಿನ ಆ್ಯಪ್‌ ಮೂಲಕ ವೀಡಿಯೋ ನೋಡಿ ರೇಟಿಂಗ್‌ ಹಾಕಲು ಪ್ರಯತ್ನಿಸಿದಾಗ ಪುನಃ ಹಣ ಪಾವತಿಸುವಂತೆ ಬೇಡಿಕೆ ಇಟ್ಟಿರುವುದು ಕಂಡು ಬಂದಿದ್ದು, 74,465 ರೂ. ಜಮಾ ಮಾಡಿದ್ದಾರೆ. ಕಮಿಷನ್‌ ಸೇರಿಸಿ ವಿಡ್ರಾ ಮಾಡಲು ಪ್ರಯತ್ನಿಸಿದಲ್ಲಿ ಪುನಃ ಅಪರಿಚಿತ ವ್ಯಕ್ತಿಗಳು ವೀಡಿಯೋ ನೋಡುವಂತೆಯೂ ಹೆಚ್ಚಿನ ಹಣವನ್ನು ಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಅವರಿಗೆ ತಾನು ಮೋಸ ಹೋಗಿರುವುದು ಮನವರಿಕೆಯಾಗಿದೆ.

ಈ ಕುರಿತು ನ್ಯಾಷನಲ್‌ ಸೈಬರ್‌ ಕ್ರೈಂ ರಿಪೋರ್ಟಿಂಗ್‌ ಪೋರ್ಟಲ್‌ಗೆ ಕರೆ ಮಾಡಿ ಸೈಬರ್‌ ವಂಚನೆಗೆ ಒಳಗಾಗಿರುವ ಬಗ್ಗೆ ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!