ಆಕೆಯ ಕಣ್ಣೀರು, ಗಂಡನ ಜೈಲು ವಿಮೋಚನೆ ಮತ್ತು ರಂಝಾನ್ ಸಂತೃಪ್ತಿ
ಈ ರಂಝಾನ್ ನಲ್ಲಿ ಆದ ಹೃದಯ ವಿದ್ರಾವಕ ಘಟನೆ. ಗೌಪ್ಯತೆಗಾಗಿ ಹೆಸರು ಬಹಿರಂಗ ಪಡಿಸುವುದಿಲ್ಲ. ಎಂದಿನಂತೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ.ಫ್ರೆಂಡ್ಸ್ ಕಾರುಣ್ಯ ಯೋಜನೆಯ ರಾತ್ರಿಯ ಭೋಜನ ವಿತರಿಸಲು ಹೋಗಿದ್ದೆ. ಬುರ್ಖಾಧಾರಿ ಮಹಿಳೆಯೊಬ್ಬಳು ಬಳಿ ಬಂದು ಕಣ್ಣೀರ್ಗೆರೆದಳು. ಬಿಕ್ಕಿ ಬಿಕ್ಕಿ ಅತ್ತಳು. ಮುಖ ಮುಚ್ಚಿದ್ದ ಕಪ್ಪು ನಕಾಬ್ ಕಣ್ಣೀರ ಧಾರೆಗೆ ಒದ್ದೆಯಾಗಿತ್ತು. ಏನಮ್ಮಾ ಸಮಸ್ಯೆ ಅಂತ ಕೇಳಿದಾಗ ಬಿಕ್ಕಳಿಕೆ ಉಮ್ಮಳಿಸುತ್ತಿದ್ದ ಕಾರಣ ಆಕೆಗೆ ಮಾತು ತಡವರಿಸುತ್ತಿತ್ತು. ಗಂಡ ಜೈಲು ಪಾಲಾಗಿ 3 ತಿಂಗಳಾಯಿತು. ಇದೀಗ ಮಾನಸಿಕ ಅಸ್ವಸ್ಥತೆಯಿಂದ ಗಂಡನನ್ನು ವೆನ್ಲಾಕ್ ಆಸ್ಪತ್ರೆಯ ಜೈಲು ವಾರ್ಡಲ್ಲಿ ದಾಖಲಿಸಿದ್ದಾರೆ. ನೋಡಲು ಅನುಮತಿ ಇಲ್ಲ. ಆಸ್ಪತ್ರೆ ವಠಾರಕ್ಕೆ ದಿನಾ ಬೆಳಿಗ್ಗೆ ಬಂದು ಹೊತ್ತು ಕಂತುವಾಗ ಹೋಗುತ್ತೇನೆ. ಸತತ 3 ವಾರಂಟ್ ಗೆ ಪ್ರತಿಕ್ರಿಯಿಸದ ಕಾರಣ ಪೊಲೀಸರು ಬಂಧಿಸಿದ್ದಾರೆ. ನಾನು ಪ್ರೀತಿಸಿ ಮದುವೆ ಆಗಿರುವ ಕಾರಣ ನಮ್ಮಿಬ್ಬರ ಮನೆಯವರು ನಮ್ಮನ್ನು ದೂರ ಇಟ್ಟಿದ್ದಾರೆ. ಐದು ವರ್ಷದ ಮಗುವಿದೆ. ಏನೂ ಗತಿ ಇಲ್ಲದ ಕಾರಣ ಮಂಗಳೂರಿನ ಪಿಜಿ (ಪೇಯಿಂಗ್ ಗೆಸ್ಟ್) ಯಲ್ಲಿದ್ದೇನೆ. ಅಲ್ಲಿ ಕೂಡಾ ಪೇಮೆಂಟ್ ಮಾಡದ ಕಾರಣ ಪಿಜಿ ಬಿಡಲು ಹೇಳಿದ್ದಾರೆ. ಮಗುವನ್ನು ಹಿಡ್ಕೊಂಡು ಗೊತ್ತು ಗುರಿಯಿಲ್ಲದೇ ಎಲ್ಲಿ ಹೋಗಲಿ? ಎಂಬುದೇ ಪ್ರಶ್ನೆಯಾಗಿದೆ. ತಿನ್ನಲು ತುತ್ತು ಅನ್ನಕ್ಕಾಗಿ ಪರದಾಟ. ಮಗುವನ್ನೂ ಸಾಕಬೇಕು. ಜೈಲಲ್ಲಿರುವ ಗಂಡನ ಬಿಡಿಸಲು ಹಲವು ಕಡೆ ಅಲೆದಾಡಿದೆ. ಸಹಾಯ ಯಾಚಿಸಿದೆ. ದೊಡ್ಡ ದೊಡ್ಡ ಜನರ ಬಳಿ ಹೋದೆ. ಭರವಸೆ ನೀಡಿದರೇ ಹೊರತು ಯಾರೂ ಸಹಾಯ ಮಾಡಿಲ್ಲ. ನನ್ನನ್ನು ಮಿಸ್ ಯೂಸ್ ಮಾಡಲು ಪ್ರಯತ್ನಿಸಿದರು. ನಾನಂತಹ ಹೆಣ್ಣಲ್ಲ. ಜೀವನದಲ್ಲಿ ಜಿಗುಪ್ಸೆ ಉಂಟಾಗಿದೆ. ಗಂಡ ಹೊರಗೆ ಬಂದರೆ ನನ್ನ ಜೀವನ ಹೇಗೂ ಸಾಗುತ್ತಿತ್ತು… ಎಂದು ಆಕೆ ಬಿಕ್ಕಿಬಿಕ್ಕಿ ಅತ್ತಳು.
ಈ ಬಗ್ಗೆ ಜಿಲ್ಲಾ ಕೋರ್ಟಿಗೆ ತೆರಳಿ ಸಂಬಂಧಿಸಿದ ವಕೀಲರಲ್ಲಿ ನಾನು ಕೂಲಂಕುಷ ವಿಚಾರಣೆ ನಡೆಸಿ ಸತ್ಯಾಸತ್ಯತೆ ತಿಳಿದು ಕೊಂಡೆ. ಆಕೆಯ ಗಂಡ ಒಂದು ಕೇಸಲ್ಲಿ ಬಂಧಿತನಾಗಿದ್ದ. ಬಳಿಕ ಜೈಲೊಳಗೆ ಆದ ಗಲಾಟೆಯೊಂದರಲ್ಲಿ ಆತ 9ನೇ ಆರೋಪಿಯಾಗಿದ್ದ. ಆ ವಾರಂಟ್ ಗೆ ಮನ್ನಣೆ ನೀಡದ ಕಾರಣ ಪುನಹ ಜೈಲುಪಾಲಾಗಿದ್ದಾನೆ. ಹೊರಬರಲು 30 ಸಾವಿರ ದಂಡ ಮತ್ತು ಎರಡು ಜಾಮೀನು ಬೇಕಾಗಿತ್ತು. ಈ ವ್ಯವಸ್ಥೆಗೆ ಆಕೆಗೆ ಯಾರೂ ಸಹಾಯ ನೀಡಿರಲಿಲ್ಲ. ಸಹಾಯದ ಭರವಸೆ ನೀಡಿದವರು ವಕ್ರದೃಷ್ಟಿ ಬೀರಿದ್ದರು. ಅದಕ್ಕೆ ಆಕೆ ಸ್ಪಂದಿಸದ ಕಾರಣ ಸಹಾಯ ಮರೀಚಿಕೆಯಾಗಿತ್ತು. ಈ ಬಗ್ಗೆ ನನ್ನ ಒಬ್ಬ ಉತ್ತಮ ಸ್ನೇಹಿತ ವಿದೇಶದಲ್ಲಿರುವ ಶಮೀರ್ ಅವರಲ್ಲಿ ಆಕೆಯ ಸಮಸ್ಯೆಯ ವಿಷಯ ಹೇಳಿದೆ. ತಕ್ಷಣ ದಂಡದ ಮೊತ್ತ 30 ಸಾವಿರ ಕಳುಹಿಸಿದರು. ಒಂದು ಜಾಮೀನಿನ ಮೊತ್ತ 7 ಸಾವಿರ ಸ್ನೇಹಿತ ಝುಬೈರ್ ಡ್ರೀಮ್ಸ್ ನೀಡಿದರು. ಮತ್ತೊಂದು ಜಾಮೀನು ಹಾಗೂ ವಕೀಲರ ಫೀಸ್ ಆಕೆಯೇ ಹೊಂದಿಸಿದ್ದಳು. ನಾವು ಸ್ನೇಹಿತರು ಆಕೆ ಮತ್ತು ಮಗುವಿಗೆ ಈದ್ ಡ್ರೆಸ್, ರೇಶನ್ ನೀಡಿ ಬೀಳ್ಕೊಟ್ಟೆವು. ಮೊನ್ನೆ ಗಂಡ ಜೈಲಿಂದ ರಿಲೀಸ್ ಆದ. ದೈಹಿಕ ಶಕ್ತಿ ಇಲ್ಲದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ಆಕೆ ಬೆಟ್ಟದಷ್ಟು ಖುಷಿಯಲ್ಲಿದ್ದಾಳೆ. ಕಷ್ಟಕಾಲದಲ್ಲಿ ಸಹಕರಿಸಿದ್ದಕ್ಕಾಗಿ ಪ್ರಾರ್ಥನೆಯ ಮಳೆಗೆರೆದಿದ್ದಾಳೆ. ಆಕೆಯ ಐದರ ಹರೆಯದ ಮಗು ಕೂಡಾ ಪ್ರಾರ್ಥಿಸಿ ವಾಯ್ಸ್ ಮೆಸೇಜ್ ಕಳುಹಿಸಿದ್ದನ್ನು ಆಲಿಸಿದಾಗ ಕರುಳು ಕಿತ್ತು ಬರುತ್ತದೆ. ಸೃಷ್ಟಿಕರ್ತನ ಅಪಾರ ಅನುಗ್ರಹದಿಂದ ಗಂಡ ಹೆಂಡತಿ ಮತ್ತೆ ಒಂದಾಗಿದ್ದಾರೆ. ರಂಝಾನ್ ತಿಂಗಳಲ್ಲಿ ಜೈಲು ವಿಮೋಚನೆಗೊಳಿಸಿದ ಹಾಗೂ ಸಹೋದರಿಯೊಬ್ಬಳ ಬಾಳಿಗೆ ಬೆಳಕಾದ, ಮಗುವಿನ ಮುಗ್ದ ಮನಸ್ಸಿನ ಸಂತೃಪ್ತಿಗೆ ಕಾರಣವಾದ ಖುಷಿ ನಮಗಿದೆ.
ವಿಶೇಷ ಲೇಖನ- ರಶೀದ್ ವಿಟ್ಲ




