ಶವಾಗಾರದ ಫ್ರೀಜರ್ ನಲ್ಲಿ ಏಳು ಗಂಟೆಗಳ ಕಾಲ ಇರಿಸಿದ್ದ ವ್ಯಕ್ತಿ ಮತ್ತೆ ಬದುಕಿ ಬಂದ!
ಲಕ್ನೋ: ಮೃತಪಟ್ಟಿದ್ದಾರೆ ಎಂದು ವೈದ್ಯರೇ ಘೋಷಿಸಿ ಬಳಿಕ ಶವಾಗಾರಾದ ಫ್ರೀಜರ್ ನಲ್ಲಿ ಏಳು ಗಂಟೆಗಳ ಕಾಲ ಇರಿಸಿದ್ದ ವ್ಯಕ್ತಿಯೊಬ್ಬರು ಉಸಿರಾಡಲು ಆರಂಭಿಸಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮೊರಾದಾಬಾದ್‌ನಲ್ಲಿ ಗುರುವಾರದಂದು ಮೋಟಾರು ಬೈಕಿಗೆ ಢಿಕ್ಕಿ ಹೊಡೆದು ಗಂಭೀರ ಸ್ಥಿತಿಯಲ್ಲಿ ಎಲೆಕ್ಟ್ರೀಶಿಯನ್ ಶ್ರೀಕೇಶ್ ಕುಮಾರ್ (45) ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಶುಕ್ರವಾರ ಮುಂಜಾನೆ ೩ ಗಂಟೆಯ ವೇಳೆಗೆ ಆತ ಸಾವನ್ನಪ್ಪಿರುವುದಾಗಿ ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದ್ದಾರೆ. ಬಳಿಕ ಆತನ ದೇಹವನ್ನು ಶವಾಗಾರದ ಫ್ರೀಜರ್‌ನಲ್ಲಿ ಇರಿಸಲಾಯಿತು.
ಅಪಘಾತ ಪ್ರಕರಣದ ಪಂಚನಾಮೆ ಮಾಡುವ ಸಲುವಾಗಿ ಶುಕ್ರವಾರ ನಾಲ್ವರು ಪೊಲೀಸರು ಹಾಗೂ ಮೃತನ ಕುಟುಂಬದ ನಾಲ್ವರು ಬಂದಿದ್ದಾರೆ. ‘ಪೊಲೀಸ್ ತಂಡ ಮತ್ತು ಅವರ ಕುಟುಂಬವು ಶವಪರೀಕ್ಷೆಗಾಗಿ ದಾಖಲೆಗಳನ್ನು ಪ್ರಾರಂಭಿಸಲು ಬಂದಾಗ, ದೇಹವು ಬಿಸಿಯಾಗಿದ್ದು ಜೀವಂತವಾಗಿರುವುದು ಕಂಡುಬಂದಿದೆ. ತಕ್ಷಣವೇ ವೈದ್ಯರನ್ನು ಕರೆಯಿಸಲಾಗಿದೆ.
ಶ್ರೀಕೇಶ್ ಇನ್ನೂ ಉಸಿರಾಡುತ್ತಿರುವುದು ಕಂಡು ವೈದ್ಯರು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೇರಠ್ ನ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪ್ರಜ್ಞೆಗೆ ಬಂದಿಲ್ಲದಿದ್ದರೂ, ಆತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಪ್ರಾಣಾಪಾಯವಿಲ್ಲದಿರುವುದಾಗಿ ವೈದ್ಯರು ತಿಳಿಸಿದ್ದಾರೆ.





