December 19, 2025

ಚಾಕ್‌ಲೇಟ್‌, ಚೂಯಿಂಗ್‌ ಗಮ್‌, ತೆಂಗಿನಕಾಯಿ ಸಸಿಗಳಲ್ಲಿ ಡ್ರಗ್ಸ್  ಸಾಗಾಟ:
6 ಮಂದಿಯ ಬಂಧನ

0
image_editor_output_image75372916-1637559354838.jpg

ಬೆಂಗಳೂರು: ಕರ್ನಾಟಕ, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿರುವ ಎನ್‌ಸಿಬಿ ಅಧಿಕಾರಿಗಳು, ಭಾರಿ ಪ್ರಮಾಣದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

‘ಬೆಂಗಳೂರಿನಲ್ಲಿ ಸಿಕ್ಕ ಪ್ರಾಥಮಿಕ ಮಾಹಿತಿ ಆಧರಿಸಿ ಮೂರು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. 244 ಗ್ರಾಂ ಆ್ಯಂಫೆಟಮೈನ್, 25 ಎಲ್‌ಎಸ್‌ಡಿ ಕಾಗದ ಚೂರುಗಳು, 2 ಗ್ರಾಂ ಮೆಥಾಂಕ್ಯುಲೊನ್, 44 ಗ್ರಾಂ ಮೆಥಾಂಫೆಟಮೈನ್ ಹಾಗೂ 212 ಕೆ.ಜಿ 500 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಎನ್‌ಸಿಬಿ ವಲಯ ನಿರ್ದೇಶಕ ಅಮಿತ್ ಘಾವಟೆ ಹೇಳಿದರು.

‘ಚಾಕ್‌ಲೇಟ್‌, ಚೂಯಿಂಗ್‌ ಗಮ್‌ ಹಾಗೂ ತೆಂಗಿನಕಾಯಿ ಸಸಿಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು. ಈ ಕೃತ್ಯದಲ್ಲಿ ಭಾಗಿಯಾಗಿದ್ದ 6 ಮಂದಿ ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದೂ ತಿಳಿಸಿದರು.

‘ಬೆಂಗಳೂರಿನಿಂದ ತಿರುವನಂತಪುರಕ್ಕೆ ಕಳುಹಿಸಿದ್ದ ಪಾರ್ಸೆಲ್‌ನಲ್ಲಿ ಡ್ರಗ್ಸ್‌ ಬಚ್ಚಿಟ್ಟಿದ್ದ ಮಾಹಿತಿ ಸಿಕ್ಕಿತ್ತು. ಅದನ್ನು ಆಧರಿಸಿ ತಿರುವನಂತಪುರಕ್ಕೆ ಹೋದ ತಂಡ, ಸ್ಥಳವೊಂದರ ಮೇಲೆ ದಾಳಿ ಮಾಡಿ ಪಾರ್ಸೆಲ್ ಪತ್ತೆ ಮಾಡಿತು. ಪಾರ್ಸೆಲ್ ಪಡೆದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದೂ ಅಮಿತ್‌ ಘಾವಟೆ ಹೇಳಿದರು.

‘ತಮಿಳುನಾಡು ಹಾಗೂ ಕೇರಳದಲ್ಲಿ ಹಲವು ದಿನಗಳಿಂದ ಮಳೆ ಆಗುತ್ತಿದೆ. ರೆಡ್ ಅಲರ್ಟ್ ಸಹ ಘೋಷಿಸಲಾಗಿದೆ. ಇದರ ನಡುವೆಯೂ ಪೆಡ್ಲರ್‌ಗಳು, ಡ್ರಗ್ಸ್ ಸಾಗಣೆ ಮಾಡುತ್ತಿದ್ದರು’ ಎಂದೂ ಅವರು ವಿವರಿಸಿದರು.

‘ತಮ್ಮದೇ ಗ್ಯಾಂಗ್ ಕಟ್ಟಿಕೊಂಡಿದ್ದ ಆರೋಪಿಗಳು, ವ್ಯವಸ್ಥಿತವಾಗಿ ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಮಾಡುತ್ತಿದ್ದರು. ಕೃತ್ಯಕ್ಕೆ ಬಳಸಿದ್ದ ಎರಡೂ ವಾಹನಗಳನ್ನೂ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!