ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ
ಕುಂದಾಪುರ: ತೆಕ್ಕಟ್ಟೆಯ ರಾ.ಹೆ.66 ತೆಕ್ಕಟ್ಟೆ ಕೆನರಾ ಬ್ಯಾಂಕ್ ಎದುರು ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಜಖಂಗೊಂಡ ಘಟನೆ ಫೆ.1ರಂದು ಬೆಳಗ್ಗೆ ಗಂಟೆ 11.30 ರ ಸುಮಾರಿಗೆ ಸಂಭವಿಸಿದೆ.
ಕುಂದಾಪುರದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಾರು ಅದೇ ಮಾರ್ಗದಲ್ಲಿ ಮುಂಭಾಗದಲ್ಲಿ ಸಾಗುತ್ತಿದ್ದ ಕಾರು ತೆಕ್ಕಟ್ಟೆ ರಾ.ಹೆ.66ರ ಎಡಭಾಗದ ಬಣ್ಣದಬೈಲು ಸಂಪರ್ಕ ಕಲ್ಪಿಸುವ ಒಳರಸ್ತೆಗೆ ತಿರುಗಿಸುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಬಂದು ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪರಿಣಾಮ ಕಾರಿನ ಏರ್ ಬ್ಯಾಗ್ ತೆರೆದಿದ್ದು ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಿಂದ ಎರಡು ವಿದ್ಯುತ್ ಕಂಬಗಳು ತುಂಡಾಗಿದೆ.
ಘಟನೆಯ ತೀವ್ರತೆಗೆ ಒಂದು ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡಿದ್ದು, ಎರಡು ಟಯರ್ ಗಳು ಸಿಡಿದಿದೆ.
ಮತ್ತೊಂದು ಕಾರಿನ ಚಾಲಕ ಕುಂದಾಪುರದ ನರಸಿಂಹ ಹೊಳ್ಳ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಘಟನೆ ಸಂಭವಿಸುತ್ತಿದ್ದಂತೆ ಕೋಟ ಪೊಲೀಸ್ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.




