February 3, 2026

ಮಂಗಳೂರು: ಉದ್ಯಮಿ ಮನೆಯಿಂದ ಚಿನ್ನಾಭರಣ, ನಗದು ಕಳವು

0
image_editor_output_image-1833830584-1770075295256.jpg

ಮಂಗಳೂರು: ಸಣ್ಣ ಉದ್ಯಮಿ ಪವನ್ ಕುಮಾರ್ ಅವರ ಕಿನ್ನಿಗೋಳಿಯಲ್ಲಿರುವ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳರು ಮನೆಯ ಬಾಗಿಲು ಮುರಿದು ನುಗ್ಗಿ ಕಪಾಟಿನ ಬಾಗಿಲು ಒಡೆದು ಚಿನ್ನಾಭರಣ ಹಾಗೂ ನಗದು ಕದ್ದಿರುವ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶದಲ್ಲಿ ವರದಿಯಾಗಿದೆ.

ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಮನೆಯವರು ಆಸ್ಪತ್ರೆಗೆ ತೆರಳಿದ್ದ ವೇಳೆ, ಈ ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ. ಮನೆಯ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಕಪಾಟನ್ನು ಒಡೆದು ಚಿನ್ನಾಭರಣಗಳು ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಮನೆಯಲ್ಲಿ ಪವನ್ ಕುಮಾರ್ ಅವರ ತಾಯಿ ಒಬ್ಬರೇ ವಾಸವಾಗಿದ್ದು, ಈ ಘಟನೆ ಕುಟುಂಬದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹಣಕಾಸಿನ ನಷ್ಟಕ್ಕಿಂತಲೂ ತಾಯಿಯ ಸುರಕ್ಷತೆಯೇ ಮುಖ್ಯ ಚಿಂತೆಯಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ. ಇಂದು ಫರೆನ್ಸಿಕ್ ತಜ್ಞರು ಹಾಗೂ ಪೊಲೀಸ್ ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯವರ ಬಗ್ಗೆ ತಿಳಿದಿರುವವರು ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇತ್ತೀಚಿನ ದಿನಗಳಲ್ಲಿ ಇಂತಹ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ವೃದ್ಧರು ಒಬ್ಬರೇ ವಾಸಿಸುವ ಮನೆಗಳಿಗೆ ಹೆಚ್ಚಿನ ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!