July 6, 2026

ಮಂಗಳೂರು: ನೆರವಿನ ಭರವಸೆ ನೀಡಿ ಮಹಿಳೆಯ ಚಿನ್ನಾಭರಣ ಪಡೆದು ವಂಚನೆ: ದೂರು ದಾಖಲು

0
IMG-20230409-WA0012.jpg

ಮಂಗಳೂರು: ಮನೆ ನಿರ್ಮಿಸಲು ಶೇಖ್ ಒಬ್ಬರಿಂದ ಸಹಾಯ ದೊರಕಿಸಿಕೊಡುವುದಾಗಿ ಹೇಳಿ ವ್ಯಕ್ತಿಯೋರ್ವ ಮಹಿಳೆಯ ಚಿನ್ನಾಭರಣ ಪಡೆದು ವಂಚಿಸಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಬಂದರು ಪೊಲೀಸರು ತಿಳಿಸಿದ್ದಾರೆ.

ಆತಿಕಾ ಎಂಬವರನ್ನು ಮಾ.26ರಂದು ತೊಕ್ಕೊಟ್ಟು ರೈಲ್ವೆ ಹಳಿಯ ಬಳಿ ಭೇಟಿಯಾದ ಸುಮಾರು 50 ವರ್ಷ ಪ್ರಾಯದ ಅಪರಿಚಿತ ಗಂಡಸು ತನ್ನ ಹೆಸರು ರಶೀದ್ ಎಂಬುದಾಗಿ ಪರಿಚಯ ಮಾಡಿಕೊಂಡಿದ್ದ . ಬಳಿಕ ಅದೇ ದಿನ ಆತಿಕಾ ವಾಸವಿರುವ ಬಾಡಿಗೆ ಮನೆಗೆ ಬಂದಿದ್ದ ರಶೀದ್ ‘ನೀವು ಇಷ್ಟು ಬಾಡಿಗೆ ಕೊಟ್ಟು ಈ ಮನೆಯಲ್ಲಿ ಇರುತ್ತೀರಾ, ನೀವು ಬೇರೆ ಮನೆ ಮಾಡಲು ನಾನು ವ್ಯವಸ್ಥೆ ಮಾಡುತ್ತೇನೆ. ನಾಳೆ ಬಂದರ್ ಮಸೀದಿಯಲ್ಲಿ ನನಗೆ ಸಿಗಬೇಕು’ ಎನ್ನುತ್ತಾ ಎರಡು ಮೊಬೈಲ್ ಸಂಖ್ಯೆಗಳನ್ನು ನೀಡಿ ಹೋಗಿದ್ದ.

ಮಾ.27ರಂದು ಮಧ್ಯಾಹ್ನ ಆತಿಕಾ ನಗರದ ಬಂದರ್ ಮಸೀದಿಗೆ ಬಂದಾಗ ಅವರನ್ನು ರಶೀದ್ ಮಧ್ಯಾಹ್ನ 1:45ಕ್ಕೆ ಫಳ್ನೀರ್ ರಸ್ತೆಯ ಹೊಟೇಲ್‌ನ ರೂಮಿಗೆ ಕರೆದುಕೊಂಡು ಹೋಗಿ ‘ಈಗ ಶೇಖ್‌ನ ಹೆಂಡತಿ ಬರುತ್ತಾರೆ. ನಿನ್ನ ಮೈಮೇಲಿರುವ ಚಿನ್ನಾಭರಣ ನೋಡಿದರೆ ಅವರು ಸಹಾಯ ಮಾಡುವುದಿಲ್ಲ. ಅದನ್ನು ನನ್ನ ಬಳಿ ಇಟ್ಟುಕೊಳ್ಳುತ್ತೇನೆ’ ಎಂದಿದ್ದ ಎನ್ನಲಾಗಿದೆ.

ಅದರಂತೆ ಆತಿಕಾ ತನ್ನ ಮೈಮೇಲಿದ್ದ ಚಿನ್ನದ ಕಿವಿಯೋಲೆ, ಉಂಗುರ, ಬಳೆ ಇತ್ಯಾದಿಗಳನ್ನು ನೀಡಿದ ಬಳಿಕ ಅಲ್ಲಿಂದ ಮತ್ತೊಂದು ಹೊಟೇಲ್‌ಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿ ಶೇಖ್‌ನ ಪತ್ನಿಯನ್ನು ಕರೆದುಕೊಂಡು ಬರುವುದಾಗಿ ಹೇಳಿ ಹೊರಗೆ ಹೋದ ರಶೀದ್ ಎಂಬ ಹೆಸರಿನ ವ್ಯಕ್ತಿ ವಾಪಸ್ ಬಂದಿಲ್ಲ. ಸುಮಾರು 2 ಲ.ರೂ. ಮೌಲ್ಯದ ಚಿನ್ನಾಭರಣವನ್ನು ಪಡೆದು ವಂಚಿಸಿರುವುದಾಗಿ ಆತಿಕಾ ಮಂಗಳೂರು ಉತ್ತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!