ಕಾಸರಗೋಡು: ತಂಡವೊಂದರಿಂದ ಚಾಲಕರಿಗೆ ರಿವಾಲ್ವರ್ ತೋರಿಸಿ ಎರಡು ಲಾರಿ ಅಪಹರಣ, ಹಲ್ಲೆ: ನಾಲ್ವರು ಆರೋಪಿಗಳ ಬಂಧನ
ಕಾಸರಗೋಡು: ತಂಡವೊಂದು ಚಾಲಕರಿಗೆ ರಿವಾಲ್ವರ್ ತೋರಿಸಿ ಬೆದರಿಸಿ ಎರಡು ಲಾರಿಗಳನ್ನು ಅಪಹರಿಸಿದ ಘಟನೆ ಬುಧವಾರ ಸಂಜೆ ಮಿಯಪದವಿನಲ್ಲಿ ನಡೆದಿದ್ದು, ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ ನಾಲ್ವರನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಹಾರಾಷ್ಟ್ರ ನಾಸಿಕ್ ನ ರಾಕೇಶ್ ಕಿಶೋರ್ (25)ಸೋಂಕಾಲಿನ ಹೈದರ್ ಅಲಿ ( 22), ಪೈವಳಿಕೆ ಕಳಾಯಿ ಯ ಸಯಾಫ್ (22), ಮೀಯ ಪದವು ಮುಹಮ್ಮದ್ ಸಫ್ವಾನ್ (23) ಬಂಧಿತರು. ಮೀಯಪದವಿನ ಅಬ್ದುಲ್ ರಹೀಂ ಸೇರಿದಂತೆ ಇತರ ಇಬ್ಬರು ಪರಾರಿಯಾಗಿದ್ದು, ಬಂಧಿತರಿಂದ ಒಂದು ಪಿಸ್ತೂಲ್, ನಾಲ್ಕು ಸಜೀವ ಗುಂಡು, ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬುಧವಾರ ಸಂಜೆ ಆರು ಗಂಟೆ ಸುಮಾರಿಗೆ ಮೀಯಪದವು ಬೆಜ್ಜದಲ್ಲಿ ತಂಡವೊಂದು ಹಫ್ತಾ ವಸೂಲಿಗಾಗಿ ಎರಡು ಕೆಂಗಲ್ಲು ಲಾರಿ ಚಾಲಕರಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ಲಾರಿಯಿಂದ ಕೆಳ ಗಿಳಿಸಿ ಮೊಬೈಲ್, ಹಣವನ್ನು ದೋಚಿ ಲಾರಿಗಳನ್ನು ಅಪಹರಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಮಂಜೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಬೆನ್ನಟ್ಟಿದ್ದಾಗ ಪೈವಳಿಕೆ ಕೊಮ್ಮಂಗಳ ಬಳಿ ಎರಡು ಲಾರಿ ಗಳನ್ನು ಬಿಟ್ಟು ಪರಾರಿ ಯಾಗ ಲೆತ್ನಿಸಿದಾಗ ಇಬ್ಬರನ್ನು ಬಂಧಿಸಿದ್ದು, ಬಳಿಕ ಕಾರನ್ನು ವಶಕ್ಕೆ ತೆಗೆದು ಅದರಲ್ಲಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.




