ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಹಾಕದ ಬ್ರಿಟನ್ ಪ್ರಧಾನಿಗೆ ದಂಡ ವಿಧಿಸಿದ ಪೊಲೀಸರು
ಲಂಡನ್: ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್ ತೆಗೆದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಆರ್ಥಿಕ ಸಂಕಷ್ಟ, ನಾಯಕತ್ವ ಬದಲಾವಣೆ ಮತ್ತು ಇತರ ಕಾರಣಗಳಿಂದ ಸದ್ಯ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಕನ್ಸರ್ವೇಟಿವ್ ಪಕ್ಷಕ್ಕೆ ಜನಪ್ರಿಯತೆ ತಂದುಕೊಡುವ ಪ್ರಯತ್ನದಲ್ಲಿರುವ ರಿಷಿ ಅವರಿಗೆ ಈ ಬೆಳವಣಿಗೆ ಹಿನ್ನಡೆ ಉಂಟು ಮಾಡಿದೆ.
ಉತ್ತರ ಇಂಗ್ಲೆಂಡ್‌ಗೆ ಕಾರಿನಲ್ಲಿ ಪ್ರಯಾಣಿಸುವಾಗ ಸಾಮಾಜಿಕ ಮಾಧ್ಯಮಕ್ಕಾಗಿ ವಿಡಿಯೊ ಚಿತ್ರೀಕರಣ ಮಾಡಲು ತಾತ್ಕಾಲಿಕವಾಗಿ ಸೀಟ್ ಬೆಲ್ಟ್ ತೆಗೆದಿದ್ದ ರಿಷಿ ಸುನಕ್ ಅವರು ವಿವಾದಕ್ಕೆ ಕಾರಣವಾಗಿದ್ದರು. ಈ ಪ್ರಮಾದಕ್ಕಾಗಿ ಅವರು ಕ್ಷಮೆಯನ್ನೂ ಕೇಳಿದ್ದಾರೆ.
ದೇಶದಾದ್ಯಂತ ಜಾರಿಗೊಳಿಸಲು ಉದ್ದೇಶಿಸಿರುವ 100ಕ್ಕೂ ಅಧಿಕ ಕಾರ್ಯಕ್ರಮಗಳ ಕುರಿತ ಪ್ರಚಾರಕ್ಕಾಗಿ ಮಾಡಿದ್ದ ವಿಡಿಯೊವನ್ನು ಸುನಕ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಅವರು ಸೀಟ್ ಬೆಲ್ಟ್ ಧರಿಸದಿರುವುದನ್ನು ಸಾರ್ವಜನಿಕರು ಗಮನಿಸಿದ್ದರು. ಈ ವಿಷಯದ ಬಗ್ಗೆ ತನಿಖೆ ಮಾಡುವುದಾಗಿ ಪೊಲೀಸರು ತಿಳಿಸಿದ್ದರು.




