ಹೆತ್ತ ಮಗಳನ್ನೇ ಗುಂಡಿಕ್ಕಿ ಹತ್ಯೆಗೈದ ತಾಯಿ
ಹೂಸ್ಟನ್ (ಅಮೆರಿಕ): ಕೇವಲ 4 ವರ್ಷದ ಮಗಳ ಕಸ್ಟಡಿ ವ್ಯಾಜ್ಯದಲ್ಲಿ ನ್ಯಾಯಾಲಯದಲ್ಲಿ ಸೋಲು ಅನುಭವಿಸಿದ ಕೆಲವೇ ಗಂಟೆಗಳಲ್ಲಿ, ತಾಯಿಯೊಬ್ಬಳು ತನ್ನ ಹೆತ್ತ ಮಗಳ ಮೇಲೆಯೇ ಗುಂಡು ಹಾರಿಸಿ ಹತ್ಯೆಗೈದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್‌ನಲ್ಲಿ ನಡೆದಿದೆ.
ವಿಚ್ಛೇದನ ಪಡೆದಿದ್ದ 35 ವರ್ಷದ ಸಿಬೆಲ್ಲೆ ಸವೆಲ್ಲಾ ಎಂಬಾಕೆಯೇ ಈ ಕೃತ್ಯ ಎಸಗಿದ ತಾಯಿ. ನ್ಯಾಯಾಲಯದ ಆದೇಶದಂತೆ ಈಕೆ ತನ್ನ ಮಗಳು ವಿವಿಯನ್ ಳನ್ನು ಮಾಜಿ ಪತಿ ಆರನ್ ಸವೆಲ್ಲಾಗೆ ಹಸ್ತಾಂತರಿಸಬೇಕಿತ್ತು. ಆದರೆ ಮಗಳನ್ನು ನೀಡಲು ನಿರಾಕರಿಸಿದ ಆಕೆ, ದುರಂತದ ಹೆಜ್ಜೆಯಿಟ್ಟಿದ್ದಾಳೆ.
ಮೂಲತಃ ಬ್ರೆಜಿಲ್ ದೇಶದವರಾದ ಸಿಬೆಲ್ಲೆ ಹಾಗೂ ಆರನ್ ನವೆಂಬರ್ 2024 ರಲ್ಲಿ ವಿಚ್ಛೇದನ ಪಡೆದಿದ್ದರು. ತದನಂತರ ಮಗಳು ವಿವಿಯನ್ ಪಾಲನೆಗಾಗಿ ಇಬ್ಬರ ನಡುವೆ ಕಾನೂನು ಹೋರಾಟ ನಡೆಯುತ್ತಿತ್ತು.
ಮಂಗಳವಾರ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಬಾಲಕಿ ವಿವಿಯನ್ಳನ್ನು ತಂದೆ ಆರನ್ ಕಸ್ಟಡಿಗೆ ನೀಡಿ ಆದೇಶಿಸಿದ್ದರು. ಅದೇ ದಿನ ಸಂಜೆ ಮಗಳನ್ನು ತಂದೆಗೆ ಒಪ್ಪಿಸಬೇಕಿತ್ತು.
ಆದರೆ, ಮನೆಯ ಮೂರನೇ ಮಹಡಿಯಲ್ಲಿ ಗುಂಡಿನ ಸದ್ದು ಕೇಳಿಬಂದ ತಕ್ಷಣ ಸ್ಥಳೀಯ ಸಮಯ ಸಂಜೆ 5:45 ಕ್ಕೆ ಹೂಸ್ಟನ್ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಪರಿಶೀಲನೆ ನಡೆಸಿದಾಗ ಬಾಲಕಿ ವಿವಿಯನ್ ಗುಂಡೇಟಿನಿಂದ ಸ್ಥಳದಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.




