ಕಾಸರಗೋಡು: ಬಾಯ್ಲರ್‌ನಿಂದ ಅನಿಲ ಸೋರಿಕೆ: ಕಾರ್ಮಿಕ ಮೃತ್ಯು, ಇಬ್ಬರು ಗಂಭೀರ
ಕಾಸರಗೋಡು: ಕುಂಬಳೆಯ ಅನಂತಪುರ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಭಾನುವಾರ ಬೆಳಗ್ಗೆ ಬಾಯ್ಲರ್‌ನಿಂದ ರಭಸವಾಗಿ ಅನಿಲ ಸೋರಿಕೆಯಾದ ಪರಿಣಾಮ ಒಡಿಶಾ ಮೂಲದ 19 ವರ್ಷದ ಕಾರ್ಮಿಕ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಮೃತ ಕಾರ್ಮಿಕನನ್ನು ಒಡಿಶಾ ಮೂಲದ ಮಹೇಶ್ವರ್ (19) ಎಂದು ಗುರುತಿಸಲಾಗಿದೆ.
ಗಾಯಗೊಂಡವರಲ್ಲಿ ತನುಜಿ (24) ಅವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಸಿದ್ಧಾನಂದ (21) ಎಂಬ ಮತ್ತೊಬ್ಬ ಕಾರ್ಮಿಕ ಗಾಯಗೊಂಡಿದ್ದಾರೆ.
ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ‘ಆಕ್ಸಿಜನ್ ಪ್ರೊಮ್ಯಾಕ್ಸ್’ ಕಾರ್ಖಾನೆಯಲ್ಲಿ ಬೆಳಗ್ಗೆ ಸುಮಾರು 10 ಗಂಟೆಗೆ ಈ ಘಟನೆ ಸಂಭವಿಸಿದೆ. ಈ ಕಾರ್ಖಾನೆಯಲ್ಲಿ ಕೋಳಿ ತ್ಯಾಜ್ಯದಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.
ಕಾರ್ಖಾನೆಯ ಬಾಯ್ಲರ್‌ನಿಂದ ಅನಿಲವು ಇದ್ದಕ್ಕಿದ್ದಂತೆ ತೀವ್ರ ರಭಸದಿಂದ ಹೊರಚೆಲ್ಲಿದೆ. ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ಮಹೇಶ್ವರ್ ಅವರು ಕೋಳಿ ತ್ಯಾಜ್ಯದಿಂದ ತುಂಬಿದ್ದ ಆಳವಾದ ಗುಂಡಿಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಮಹೇಶ್ವರ್ ಗುಂಡಿಗೆ ಬಿದ್ದಿದ್ದನ್ನು ಕಂಡ ತನೂಜಿ ಮತ್ತು ಸಿದ್ಧಾನಂದ ತಕ್ಷಣವೇ ಅವರನ್ನು ರಕ್ಷಿಸಲು ಧಾವಿಸಿದ್ದು, ಈ ವೇಳೆ ಅವರಿಗೂ ಗಾಯಗಳಾಗಿವೆ. ತಕ್ಷಣವೇ ಇತರ ಕಾರ್ಮಿಕರು ಮೂವರನ್ನೂ ಗುಂಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.




