ವಾಯುಪಡೆಗೆ ಸೇರಿದ ಲಘು ವಿಮಾನ ಪತನ: 32 ಮಂದಿ ದುರಂತ ಸಾವು
ಲಾಗೋಸ್ : ನೈಜೀರಿಯಾ ವಾಯುಪಡೆಗೆ ಸೇರಿದ ಲಘು ವಿಮಾನವೊಂದು ಜೌಗು ಪ್ರದೇಶದಲ್ಲಿ ಪತನಗೊಂಡು, ವಿಮಾನದಲ್ಲಿದ್ದ ಎಲ್ಲಾ 32 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ವರದಿಯಾಗಿದೆ. ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ನೈಜೀರಿಯಾ ಸರ್ಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಬೆನಿನ್ ನಗರದಿಂದ ದೇಶದ ಪ್ರಮುಖ ಆರ್ಥಿಕ ಕೇಂದ್ರವಾದ ಲಾಗೋಸ್‌ಗೆ ವಾಡಿಕೆಯ ಕಾರ್ಯಾಚರಣೆಯಲ್ಲಿದ್ದ ವಿಮಾನವು ಬೆಳಿಗ್ಗೆ ಸುಮಾರು 9:00 ಗಂಟೆಗೆ ಪತನಗೊಂಡಿದೆ. ಮೃತಪಟ್ಟವರಲ್ಲಿ 25 ಪ್ರಯಾಣಿಕರು ಹಾಗೂ ಏಳು ಮಂದಿ ವಿಮಾನ ಸಿಬ್ಬಂದಿ ಸೇರಿದ್ದಾರೆ. ದಕ್ಷಿಣ ನೈಜೀರಿಯಾದ ಕರಾವಳಿ ತೈಲ ಉತ್ಪಾದನಾ ಪ್ರದೇಶವಾದ ಒಂಡೋ ರಾಜ್ಯದ ಇಗ್ಬೊಕೊಡಾ ಬಳಿ ಈ ಭೀಕರ ಅವಘಡ ಸಂಭವಿಸಿದೆ. ಸಮೀಪದ ನೌಕಾ ನೆಲೆಯ ಬಳಿಯಿದ್ದ ಜೌಗು ಪ್ರದೇಶಕ್ಕೆ ವಿಮಾನವು ನೇರವಾಗಿ ಅಪ್ಪಳಿಸಿದೆ. ಪತನಗೊಂಡ ವಿಮಾನವನ್ನು ಅವಳಿ-ಎಂಜಿನ್‌ನ ಟರ್ಬೊಪ್ರೊಪ್ ATR-42 ಎಂದು ಗುರುತಿಸಲಾಗಿದ್ದು, ಇದು ಸಾಮಾನ್ಯವಾಗಿ 30 ರಿಂದ 50 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಅಪಘಾತದ ವೇಳೆ ಭಾರೀ ಗುಡುಗಿನಂತಹ ಶಬ್ದ ಕೇಳಿಬಂತು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಜೌಗು ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರು ಸ್ಥಳೀಯ ನೌಕಾ ನೆಲೆಗೆ ತಕ್ಷಣ ಮಾಹಿತಿ ನೀಡಿದ್ದು, ಬಳಿಕ ದೋಣಿಗಳ ಮೂಲಕ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ವಿಮಾನವು ನದಿಯ ಬಳಿ ಪತನಗೊಂಡಿದ್ದರಿಂದ ಅದರ ಹಲವು ಭಾಗಗಳು ನೀರಿನಲ್ಲಿ ಮುಳುಗಿವೆ. ನದಿಯ ದಂಡೆಯ ಮೇಲೆ ಪ್ರಯಾಣಿಕರ ಶೂ, ಚಪ್ಪಲಿ, ಬಟ್ಟೆಗಳು ಹಾಗೂ ಶವಗಳ ಭಾಗಗಳು ಹರಿದುಬಿದ್ದಿದ್ದು, ಭೀಕರ ದೃಶ್ಯ ಕಂಡುಬಂದಿದೆ.
ಅಪಘಾತದ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಘಟನೆಯ ಕುರಿತು ತಕ್ಷಣವೇ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸುವಂತೆ ವಾಯುಪಡೆಗೆ ನೈಜೀರಿಯಾ ಸರ್ಕಾರ ಸೂಚನೆ ನೀಡಿದೆ.




