ಕುಂದಾಪುರ: ನಾಪತ್ತೆಯಾಗಿದ್ದ ಯುವಕ ತೋಟದಲ್ಲಿ ಶವವಾಗಿ ಪತ್ತೆ
ಕುಂದಾಪುರ: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವ ಟಿಪ್ಪರ್ ಮಾಲಕ ಕವೀನಾ ನಾಯ್ಕ್ (26) ಅವರ ಮೃತದೇಹ ಸೋಮವಾರ ಹೊಸಂಗಡಿಯ ಮಾತಿನಮಠ ಎಂಬಲ್ಲಿನ ಖಾಸಗಿ ಜಾಗವೊಂದರಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಹೊಸಂಗಡಿ ತಾರ್ಕಿಮಕ್ಕಿ ನಿವಾಸಿಯಾಗಿರುವ ಕವೀನಾ ನಾಯ್ಕ್ ಅವರು ಹಾಲ್ಕಲ್ ಬಳಿ ಸ್ವಂತ ಟಿಪ್ಪರ್ ವಾಹನ ಇಟ್ಟುಕೊಂಡು ಕಳೆದ 3-4 ವರ್ಷಗಳಿಂದ ವ್ಯವಹಾರ ನಡೆಸಿಕೊಂಡಿದ್ದರು.
ಅಕ್ಟೋಬರ್ 2 ರಂದು ಸಂಜೆ 6:30 ರ ಸುಮಾರಿಗೆ ಕವೀನಾ ಅವರು ಸ್ನೇಹಿತನ ಬಳಿ “ಮನೆಗೆ ಹೋಗಿ ಬರುತ್ತೇನೆ” ಎಂದು ಹೇಳಿ ತೆರಳಿದ್ದರು. ಆದರೆ ಅವರು ಮನೆಗೂ ತಲುಪದೆ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಕುಟುಂಬಸ್ಥರು ಸತತವಾಗಿ ಶೋಧ ನಡೆಸಿದ್ದರು. ಈ ಕುರಿತು ಅವರ ಸಹೋದರ ಪ್ರವೀಣ್ ಅವರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸೋಮವಾರ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾಗ, ಹೊಸಂಗಡಿಯ ಮಾತಿನಮಠ ಬಳಿಯ ಖಾಸಗಿ ತೋಟವೊಂದರಲ್ಲಿ ಕವೀನಾ ಅವರ ಮೃತದೇಹ ಅಂಗಾತ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವ ಕೊಳೆತ ಸ್ಥಿತಿಯಲ್ಲಿದ್ದು, ಹುಳು-ನೊಣಗಳು ಆವರಿಸಿಕೊಂಡಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೃತದೇಹ ಸಿಕ್ಕ ಸ್ಥಳವು ಅವರು ಮನೆಗೆ ಹೋಗುವ ದಾರಿಯಲ್ಲಿ ಇರಲಿಲ್ಲ. ಅಲ್ಲದೆ, ಮೃತರ ಕಾಲಿನಲ್ಲಿ ಚಪ್ಪಲಿ ಇರಲಿಲ್ಲ ಹಾಗೂ ಘಟನಾ ಸ್ಥಳದಲ್ಲೂ ಯಾವುದೇ ಚಪ್ಪಲಿ ಪತ್ತೆಯಾಗಿಲ್ಲ. ಹೀಗಾಗಿ ಕವೀನಾ ಅವರ ಸಾವಿನಲ್ಲಿ ತೀವ್ರ ಸಂಶಯವಿದೆ ಎಂದು ಸಹೋದರ ಪ್ರವೀಣ್ ನೀಡಿದ ದೂರಿನನ್ವಯ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




