ಉಪ್ಪಿನಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ
ಉಪ್ಪಿನಂಗಡಿ: ಮೂರು ದಿನಗಳ ಹಿಂದೆ ಕುಮಾರಧಾರ ನದಿಯ ಹಳೆ ಸೇತುವೆಯ ಮೇಲೆ ತಮ್ಮ ಬೈಕ್ ಹಾಗೂ ಮೊಬೈಲ್ ಫೋನ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಅಕ್ಟೋಬರ್ 5 ರಂದು 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಹಿರೇಬಂಡಾಡಿ ಗ್ರಾಮದ ಪೆರಾಬೆ ನಿವಾಸಿ ಮಾಧವ ಗೌಡ (44) ಮೃತ ವ್ಯಕ್ತಿ. ಇವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಆತೂರಿನಲ್ಲಿ ಇತ್ತೀಚೆಗಷ್ಟೇ ಟಯರ್ ಪಂಕ್ಚರ್ ಅಂಗಡಿಯನ್ನು ಆರಂಭಿಸಿದ್ದ ಮಾಧವ ಗೌಡ ಅವರು ಅಕ್ಟೋಬರ್ 2 ರಂದು ಮನೆಯಿಂದ ಅಂಗಡಿಗೆಂದು ತೆರಳಿದ್ದರು. ಆದರೆ ರಾತ್ರಿಯಾದರೂ ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದರು. ಬಳಿಕ ಪರಿಶೀಲಿಸಿದಾಗ ಇವರ ಬೈಕ್ ಹಾಗೂ ಮೊಬೈಲ್ ಫೋನ್ ಉಪ್ಪಿನಂಗಡಿಯ ಕುಮಾರಧಾರ ನದಿಯ ಹಳೆ ಸೇತುವೆಯ ಮೇಲೆ ಪತ್ತೆಯಾಗಿತ್ತು.
ಇವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯಿಂದ ಅಕ್ಟೋಬರ್ 4 ರಂದು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗುತಜ್ಞರು ಕುಮಾರಧಾರ – ನೇತ್ರಾವತಿ ನದಿಗಳ ಸಂಗಮ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಅಕ್ಟೋಬರ್ 5 ರಂದು ಬೊಳ್ಳಾರ್ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಸ್ಥಳೀಯರಿಗೆ ಮೃತದೇಹವೊಂದು ತೇಲುತ್ತಿರುವುದು ಕಂಡುಬಂದಿದ್ದು, ಪರಿಶೀಲಿಸಿದಾಗ ಅದು ನಾಪತ್ತೆಯಾಗಿದ್ದ ಮಾಧವ ಗೌಡರ ಮೃತದೇಹ ಎಂಬುದು ದೃಢಪಟ್ಟಿದೆ.




