ಮನೆಯಲ್ಲಿ ನಾಯಿ ಸಾಕಿದರೆ ತೆರಿಗೆ ಕಟ್ಟಬೇಕು: ಸ್ವಚ್ಛತೆ, ಜನರ ಸುರಕ್ಷತೆಗಾಗಿ ನಿರ್ಧಾರ ತೆಗೆದುಕೊಂಡ ನಗರಸಭೆ
ಸಾಗರ್: ಇನ್ಮುಂದೆ ಮನೆಯಲ್ಲಿ ನಾಯಿ ಸಾಕಿದರೆ ನೀವು ಅದಕ್ಕಾಗಿ ನಗರಸಭೆಗೆ ಟ್ಯಾಕ್ಸ್ ಕಟ್ಟಬೇಕು. ಇಂತಹ ಒಂದು ಅಪರೂಪದ ನಿರ್ಧಾರವನ್ನು ಮಧ್ಯ ಪ್ರದೇಶ ರಾಜ್ಯದ ಸಾಗರ್ ನಗರಸಭೆ ಕೈಗೊಂಡಿದೆ.
ನಗರದ ಸ್ವಚ್ಛತೆ ಮತ್ತು ಜನರ ಸುರಕ್ಷತೆಗಾಗಿ ಈ ನಿರ್ಧಾರ ಮಾಡಲಾಗಿದ್ದು, ಎಲ್ಲಾ 40 ಮಂದಿ ಸದಸ್ಯರು ಇದನ್ನು ಅವಿರೋಧವಾಗಿ ಬೆಂಬಲಿಸಿದ್ದಾರೆ.
ಸಾಗರ ನಗರ ಸಭೆಯಿಂದ ಕಾನೂನು ರೂಪುಗೊಂಡ ನಂತರ, ಈ ವರ್ಷದ ಏಪ್ರಿಲ್ ನಿಂದಲೇ ಇದು ಜಾರಿಗೆ ಬರುವ ಸಾಧ್ಯತೆಯಿದೆ.
ನಾಯಿ ಕಾಟದ ಬಗ್ಗೆ ಸಾಗರ್ ನ ನಿವಾಸಿಗಳ ದೂರು ಹೆಚ್ಚಾದ ಹಿನ್ನೆಲೆಯಲ್ಲಿ ನಗರ ಸಭೆ ಈ ತೀರ್ಮಾನ ಮಾಡಿದೆ. ಬೀದಿ ನಾಯಿಗಳು ಮಾತ್ರವಲ್ಲದೆ, ಸಾಕು ನಾಯಿಗಳಿಂದಲೂ ನಗರದ ಸ್ವಚ್ಛತೆಗೆ ಹಾನಿಯುಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು.
ಸಾಗರ್ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಾಯಿಗಳ ನೋಂದಣಿ ಕಾರ್ಯ ನಡೆಯಲಿದ್ದು, ಲಸಿಕೆ ನೀಡಲಾಗುವುದು. ಅಲ್ಲದೆ ಮಾಲಕರಿಂದ ತೆರಿಗೆ ಸಂಗ್ರಹ ಮಾಡಲಾಗುತ್ತದೆ.




