ಲಖಿಂಪುರ ಹಿಂಸಾಚಾರ ಪ್ರಕರಣ:
ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಜಾಮೀನು ತಿರಸ್ಕಾರ
ಉತ್ತರ ಪ್ರದೇಶ: ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿ ಹಿಂಸಾಚಾರಕ್ಕೆ ಕಾರಣವಾದ ಪ್ರಕರಣದಲ್ಲಿ ಬಂಧಿತರಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಲಖಿಂಪುರ ಖೇರಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.
ಹಿಂಸಾಚಾರದಲ್ಲಿ ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಪತ್ರಕರ್ತ ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಆಶಿಶ್ ಮಿಶ್ರಾ, ಲವ್ ಕುಶ್ ರಾಣಾ ಮತ್ತು ಆಶಿಶ್ ಪಾಂಡೆ ಪ್ರಮುಖ ಆರೋಪಿಗಳಾಗಿದ್ದು ಈ ಮೂವರನ್ನು ಬಂಧಿಸಲಾಗಿದೆ. ಇದೀಗ ಈ ಮೂವರ ಜಾಮೀನು ಅರ್ಜಿಯನ್ನೂ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.
ಈ ಹಿಂಸಾಚಾರ ಪ್ರಕರಣ ತುಂಬ ಗಂಭೀರ ಸ್ವರೂಪದ್ದಾಗಿದೆ ಮತ್ತು ಕೇಸ್ಗೆ ಸಂಬಂಧಪಟ್ಟ ತನಿಖೆ ನಡೆಯುತ್ತಲೇ ಇದೆ. ಘಟನೆಗೆ ಸಂಬಂಧಪಟ್ಟಂತೆ ಕೆಲವು ಸಾಕ್ಷಿಗಳ ಹೇಳಿಕೆಗಳನ್ನು ಎಸ್ಐಟಿ ತಂಡ ನಮ್ಮೆದುರು ಸಲ್ಲಿಸಿದೆ. ಅದರಲ್ಲಿ ಬಹುತೇಕರು ಹೇಳಿದ್ದು ಆಶಿಶ್ ಮಿಶ್ರಾ ಹೆಸರನ್ನು. ರೈತರಿಗೆ ಡಿಕ್ಕಿ ಹೊಡೆದ ಮಹೀಂದ್ರಾ ಥಾರ್ ವಾಹನದಿಂದ ಆಶಿಶ್ ಮಿಶ್ರಾ ಮತ್ತು ಇತರ ಆರೋಪಿಗಳು ಕೆಳಗೆ ಇಳಿದಿದ್ದನ್ನು ಮತ್ತು ಅಲ್ಲಿಂದ ಓಡಿಹೋಗುವಾಗ ಅವರು ರೈತರೆಡೆಗೆ ಗುಂಡು ಹಾರಿಸಿದ್ದನ್ನು ನೋಡಿದ್ದೇವೆ ಎಂದೇ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಅಕ್ಟೋಬರ್ 3ರಂದು ಉತ್ತರಪ್ರದೇಶ ಉಪಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಅಜಯ್ ಮಿಶ್ರಾ ಲಖಿಂಪುರ ಖೇರಿಗೆ ಭೇಟಿ ನೀಡುವವರಿದ್ದರು. ಆದರೆ ಅವರಿಬ್ಬರ ಭೇಟಿಯನ್ನು ವಿರೋಧಿಸಿ ರೈತರು ಮೌನವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿ ರಭಸದಿಂದ ಮುನ್ನುಗ್ಗಿದ ಎಸ್ಯುವಿ ಮತ್ತು ಮಹೀಂದ್ರಾ ಥಾರ್ಗಳು ರೈತರೆಡೆಗೆ ನುಗ್ಗಿದ್ದವು. ಅದರಿಂದಾಗಿ ಒಬ್ಬ ರೈತ ಮೃತಪಟ್ಟಿದ್ದ. ಈ ವಾಹನಗಳು ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಬೆಂಗಾವಲು ಪಡೆಯದ್ದು ಎಂದು ಹೇಳಲಾಗಿತ್ತು. ವಾಹನದಿಂದ ಆಶಿಶ್ ಮಿಶ್ರಾ ಓಡಿಹೋಗಿದ್ದನ್ನು ನೋಡಿದ್ದೇವೆ ಎಂದೂ ಹಲವರು ಪ್ರತಿಪಾದಿಸಿದ್ದಾರೆ. ಅಪಘಾತ ನಡೆದ ತಕ್ಷಣ ಅಲ್ಲಿ ದೊಡ್ಡ ಹಿಂಸಾಚಾರವೇ ನಡೆದುಹೋಗಿತ್ತು. ಈ ದುರ್ಘಟನೆಯಲ್ಲಿ ಮತ್ತೆ 8 ಜನರು ಮೃತಪಟ್ಟಿದ್ದರು.





