December 19, 2025

ಸೂರ್ಯ ನಟನೆಯ ‘ಜೈ ಭೀಮ್’  ಸಿನಿಮಾಗೆ ಮತ್ತೊಂದು ಸಂಕಷ್ಟ: 
5 ಕೋಟಿ ರೂ. ಪಾವತಿಸುವಂತೆ ನೋಟಿಸ್

0
Screenshot_2021-11-16-10-39-17-70_680d03679600f7af0b4c700c6b270fe7.jpg

ತಮಿಳು‌ನಾಡು: ಸೂರ್ಯ ನಟನೆಯ ‘ಜೈ ಭೀಮ್’ ಈಗ ಸಿನಿಮಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವನ್ನಿಯಾರ್ ಸಮುದಾಯದವರು ತಮಗೆ ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಸಿನಿಮಾದ ಮುಖ್ಯ ಪಾತ್ರಧಾರಿ ಸೂರ್ಯ, ಜ್ಯೋತಿಕಾ, ಅಮೇಜಾನ್ ಪ್ರೈಮ್ ವಿಡಿಯೋ ಮತ್ತು ನಿರ್ದೇಶಕ ಟಿಜೆ ಜ್ಞಾನವೇಲ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ವನ್ನಿಯಾರ್ ಸಮುದಾಯಕ್ಕೆ ಅವಮಾನವಾಗುವ ದೃಶ್ಯಗಳನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಲಾಗಿದೆ.

ವನ್ನಿಯಾರ್ ಸಮುದಾಯದ ಅಧ್ಯಕ್ಷ ಪು ಥಾ ಅರುಳ್ಮೋಳಿ ಅವರು ಸಿನಿಮಾದಲ್ಲಿ ಬರುವ ಕೆಲ ದೃಶ್ಯಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ದೃಶ್ಯಗಳು ವನ್ನಿಯಾರ್ ಸಮುದಾಯಕ್ಕೆ ಅವಮಾನ ಮಾಡುವ ರೀತಿಯಲ್ಲಿದೆ. ಈ ಕಾರಣಕ್ಕೆ ಅವುಗಳನ್ನು ತೆಗೆದು ಹಾಕಬೇಕು ಎಂದು ನೋಟಿಸ್ ನೀಡಲಾಗಿದೆ. ಸಿನಿಮಾದಲ್ಲಿ ಬರುವ ಕ್ಯಾಲೆಂಡರ್ ಒಂದರಲ್ಲಿ ಅಗ್ನಿ ಕುಂಡದ ಫೋಟೋ ಇದೆ.

ಅಗ್ನಿ ಕುಂಡವು ವನ್ನಿಯಾರ್ ಸಮುದಾಯದ ಚಿಹ್ನೆ. ದುರುದ್ದೇಶ ಪೂರ್ವಕವಾಗಿ ಅಲ್ಲಿ ಅಗ್ನಿ ಕುಂಡದ ಚಿತ್ರವನ್ನು ಇರಿಸಲಾಗಿದೆ. ಸಿನಿಮಾದಲ್ಲಿ ಬರುವ ಸಬ್ ಇನ್ಸ್ಪೆಕ್ಟರ್ಗೆ ಗುರುಮೂರ್ತಿ ಎಂದು ಹೆಸರು ಇಡಲಾಗಿದೆ. ಈ ಸಬ್-ಇನ್ಸ್ಪೆಕ್ಟರ್ ಸಿನಿಮಾದ ಪ್ರಮುಖ ಖಳ. ಗುರುಮೂರ್ತಿ ಎಂಬುದು ಪಿಎಂಕೆಯ ಪ್ರಮುಖ ನಾಯಕ ಕಾಡುವೆಟ್ಟಿ ಜೆ ಗುರುವನ್ನು ಪ್ರತಿನಿಧಿಸುತ್ತದೆ ಎಂದು ಆರೋಪಿಸಲಾಗಿದೆ.

ಸಿನಿಮಾದಲ್ಲಿ ಕ್ಯಾಲೆಂಡರ್ ಮೇಲೆ ಇರುವ ಅಗ್ನಿ ಕುಂಡವನ್ನು ತೆಗೆದು ಹಾಕಬೇಕು. ವನ್ನಿಯಾರ್ ಸಮುದಾಯದ ಪ್ರತಿಷ್ಠೆಗೆ ಕಳಂಕ ತಂದಿದ್ದಕ್ಕಾಗಿ ಜೈ ಭೀಮ್ ತಂಡವು ಬೇಷರತ್ ಕ್ಷಮೆಯಾಚಿಸಬೇಕು. ವನ್ನಿಯಾರ್ ಸಮುದಾಯದ ವಿರುದ್ಧ ಇನ್ನು ಮುಂದೆ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ ಟೀಕೆಗಳನ್ನು ಪ್ರಕಟಿಸುವುದನ್ನು ನಿಲ್ಲಿಸಬೇಕು ಮತ್ತು ಈ ನೋಟಿಸ್ ಸ್ವೀಕರಿಸಿದ ದಿನಾಂಕದಿಂದ ಏಳು ದಿನಗಳಲ್ಲಿ 5 ಕೋಟಿ ರೂ. ಪಾವತಿಸುವಂತೆ ನೋಟಿಸ್ ನಲ್ಲಿ ಕೋರಲಾಗಿದೆ.

ಈ ಮಧ್ಯೆ ಸೂರ್ಯ ಅವರನ್ನು ಬೆಂಬಲಿಸಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ವೀಟ್ ಗಳನ್ನು ಮಾಡಲಾಗುತ್ತಿದೆ. ಸೂರ್ಯ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದು ಸಾಕಷ್ಟು ಮಂದಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!