2022ರ ಟಿ20 ವಿಶ್ವಕಪ್ ಟೂರ್ನಿಯ ದಿನಾಂಕ ನಿಗದಿ:
ಅ. 16ರಿಂದ ಆರಂಭ, ನ. 13ಕ್ಕೆ ಫೈನಲ್

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಮುಂದಿನ ಟಿ20 ವಿಶ್ವಕಪ್ ಟೂರ್ನಿಯು 2022ರ ಅಕ್ಟೋಬರ್ 16ರಿಂದ ಆರಂಭವಾಗಲಿದೆ. ಏಳು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯಕ್ಕೆ ನವೆಂಬರ್ 13ರಂದು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ವೇದಿಕೆಯಾಗಲಿದೆ.
ಅಡಿಲೇಡ್, ಬ್ರಿಸ್ಬೇನ್, ಗಿಲಾಂಗ್, ಹೋಬರ್ಟ್, ಮೆಲ್ಬರ್ನ್, ಪರ್ತ್ ಹಾಗೂ ಸಿಡ್ನಿಯಲ್ಲಿ ಅ. 16ರಿಂದ ನ. 13ರ ವರೆಗೆ ಒಟ್ಟು 45 ಹಣಾಹಣಿ ನಡೆಯಲಿವೆ. ಸಿಡ್ನಿ ಮತ್ತು ಅಡಿಲೇಡ್ ಕ್ರೀಡಾಂಗಣಗಳಲ್ಲಿ ನವೆಂಬರ್ 9 ಮತ್ತು 10ರಂದು ಸೆಮಿಫೈನಲ್ಸ್ ನಿಗದಿಯಾಗಿವೆ.
2021ರ ಟಿ20 ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ, ರನ್ನರ್–ಅಪ್ ನ್ಯೂಜಿಲೆಂಡ್ ಜೊತೆಗೆ ಭಾರತ, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೂಪರ್–12 ಹಂತಕ್ಕೆ ನೇರ ಪ್ರವೇಶ ಪಡೆದಿವೆ. ಉಳಿದ ನಾಲ್ಕು ತಂಡಗಳು ಗುಂಪು ಹಂತದಲ್ಲಿ ಸೆಣಸಿ ಅರ್ಹತೆ ಗಿಟ್ಟಿಸಲಿವೆ.
2012 ಮತ್ತು 2016ರಲ್ಲಿ ಚಾಂಪಿಯನ್ ಆಗಿರುವ ವೆಸ್ಟ್‌ಇಂಡೀಸ್, 2014ರಲ್ಲಿ ಪ್ರಶಸ್ತಿ ಗೆದ್ದಿದ್ದ ಶ್ರೀಲಂಕಾ, 2021ರ ಟೂರ್ನಿಯ ಸೂಪರ್-12 ಹಂತದಲ್ಲಿ ಆಡಿರುವ ನಮೀಬಿಯಾ ಮತ್ತು ಸ್ಕಾಟ್ಲೆಂಡ್ ಗುಂಪು–1ರಲ್ಲಿ ಸೆಣಸಲಿವೆ.