ಸಾಲೆತ್ತೂರು: ಬಡ ಕುಟುಂಬವೊಂದರ ಮನೆಯ ಕನಸನ್ನು ನನಸಾಗಿಸಿದ ದಾನಿಗಳು
ಸಾಲೆತ್ತೂರು: ಕೊಳ್ನಾಡು ಗ್ರಾಮದ ಕುಲಾಲು ಸಮೀಪದ ಕುಂಟ್ರಕಲಾದಲ್ಲಿ ಅತ್ಯಂತ ಬಡ ಕುಟುಂಬವೊಂದರ ಮನೆಯ ಕನಸನ್ನು ದಾನಿಗಳು ಮುಂದೆ ನಿಂತು ನನಸು ಮಾಡಿದ ಹೃದ್ಯ ಬೆಳವಣಿಗೆಯೊಂದು ನಡೆದಿದೆ.
ಹರೀಶ್ ಮತ್ತು ವಸಂತಿ ದಂಪತಿಗಳು ತಮ್ಮ ಮೂವರು ಪುಟ್ಟ ಮಕ್ಕಳೊಂದಿಗೆ ಅತಿದುರ್ಬಲ ಜೋಪಡಿಯಲ್ಲಿ ವಾಸವಿದ್ದರು. ಮಳೆಗಾಲದಲ್ಲಿ ಮಳೆಯ ನೀರನ್ನೂ ತಡೆದುಕೊಳ್ಳಲಾಗದ ಮತ್ತು ಬೇಸಿಗೆಯಲ್ಲಿ ಬಿಸಿಲನ್ನೂ ತಾಳಲಾರದ ಹುಲ್ಲಿನ ಜೋಪಡಿಯಲ್ಲಿ ವಾಸವಿದ್ದ ಈ ದಂಪತಿಗಳನ್ನು ಕಂಡು ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರೂ ಹಾಲಿ ಉಪಾಧ್ಯಕ್ಷ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು ಇವರಿಗೊಂದು ಸೂರು ಒದಗಿಸಿಕೊಡುವ ನಿರ್ಧಾರಕ್ಕೆ ಬಂದರು. ಅಲ್ಲದೇ, ಈ ಕುಟುಂಬದ ದಯನೀಯ ಸ್ಥಿತಿಯನ್ನು ಸಮಾಜಸೇವಕ ಹಸೈನಾರ್ ತಾಳಿತ್ತನೂಜಿ ಅವರಲ್ಲಿ ಹಂಚಿಕೊಂಡರು. ಇವರಿಗೆ ಇಂಜಿನಿಯರ್ ಯಾಸಿರ್ ಕುಕ್ಕಿಲ ಜೊತೆಯಾದರು. ಇದೇವೇಳೆ ಅನಿವಾಸಿ ಕನ್ನಡಿಗ ಅಬ್ದುಲ್ ಖಾದರ್ ವೀರಕಂಭ ಈ ಮನೆ ನಿರ್ಮಾಣಕ್ಕೆ ನೆರವಾಗಲು ಮುಂದೆ ಬಂದರು. ಹೀಗೆ ಸರ್ಕಾರಿ ಭೂಮಿಯಲ್ಲಿ ದುರ್ಬಲ ಜೋಪಡಿ ಕಟ್ಟಿಕೊಂಡಿದ್ದ ದಂಪತಿಗಳಿಗೆ ತಾರಸಿಯ ಮನೆ ಕಟ್ಟಿಕೊಡುವ ಪ್ರಯತ್ನ ಆರಂಭವಾಯಿತು. ಮನೆಯ ಗೋಡೆ ಎದ್ದು ನಿಂತಾಗ ಅದರ ತಾರಸಿಯ ಹೊಣೆಯನ್ನು ಹ್ಯುಮಾನಿಟಿ ಬೆಲ್ಮಣ್ಣು ಇದರ ಸ್ಥಾಪಕಾಧ್ಯಕ್ಷ ರೋಷನ್ ಬೆಲ್ಮಣ್ ವಹಿಸಿಕೊಂಡರು. ಹೀಗೆ ಸುಮಾರು ನಾಲ್ಕು ಲಕ್ಷ ರೂಪಾಯಿಗಿಂತಲೂ ಅಧಿಕ ವೆಚ್ಚದಲ್ಲಿ ಒಂದು ವಾಸಯೋಗ್ಯ ತಾರಸಿ ಮನೆ ನಿರ್ಮಾಣವಾಯಿತು.
ಈ ಮನೆಯ ಹಸ್ತಾಂತರ ಕಾರ್ಯಕ್ರಮವು ಡಿಸೆಂಬರ್ 20 ಮಂಗಳವಾರ ನಡೆಯಿತಲ್ಲದೆ ಇದರಲ್ಲಿ ರೋಷನ್ ಬೆಲ್ಮಣ್ ಸುಭಾಶ್ಚಂದ್ರ ಶೆಟ್ಟಿ, ಹಸೈನಾರ್, ಇಂಜಿನಿಯರ್ ಯಾಸಿರ್, ಸಮಾಜಸೇವಕ ಸಲಾಮ್ ಸಮ್ಮಿ, ಸನ್ಮಾರ್ಗ ಸಂಪಾದಕ ಏ ಕೆ ಕುಕ್ಕಿಲ, ಮೌರಿಸ್ ಮತ್ತು ಊರಿನವರು ಭಾಗವಹಿಸಿದರು. ಧರ್ಮದ ಹೆಸರಲ್ಲಿ ಜನರನ್ನು ಹಿಂದು ಮುಸ್ಲಿಂ ಎಂದು ಒಡೆಯುತ್ತಿರುವ ಈ ಕಾಲದಲ್ಲಿ ಹಿಂದು ಮುಸ್ಲಿಂ ಕ್ರೈಸ್ತರು ಸೇರಿಕೊಂಡು ಕಟ್ಟಿರುವ ಈ ಮನೆಯು ಧರ್ಮ ಸಂಘರ್ಷದ ಸೋಲು ಮತ್ತು ಸಾಮರಸ್ಯದ ಗೆಲುವಾಗಿದೆ. ಧರ್ಮ ಜಾತಿಯ ಆಚೆಗೆ ಮನುಷ್ಯರೆಲ್ಲ ಒಂದೇ ಮತ್ತು ಅವರ ನೋವುಗಳೂ ಒಂದೇ. ಈ ಮನೆ ಸೌಹಾರ್ದದ ಸಂಕೇತವಾಗಿ ಎಲ್ಲರಿಗೂ ಮಾದರಿಯಾಗಲಿ ಎಂದು ಸುಭಾಷ್ ಚಂದ್ರ ಶೆಟ್ಟಿ ಹಾರೈಸಿದರು. ಕುಲಾಲು ಬದಿಯಡ್ಕ ತಿಮ್ಮಪ್ಪ ರೈ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಪವಿತ್ರ ಪೂಂಜ ಭಾಗವಹಿಸಿದ್ದರು.
ಈ ಮನೆ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ ಮತ್ತು ಸಹಕರಿಸಿದ ಎಲ್ಲರಿಗೂ ಸುಭಾಶ್ಚಂದ್ರ ಶೆಟ್ಟಿ ಧನ್ಯವಾದ ಅರ್ಪಿಸಿದರು.
ಈ ಮನೆ ನಿರ್ಮಾಣಕ್ಕಾಗಿ ಶ್ರಮಿಸಿದ ಸುಭಾಶ್ಚಂದ್ರ ಶೆಟ್ಟಿ, ರೋಷನ್, ಹಸೈನಾರ್, ಯಾಸಿರ್, ಮೌರಿಸ್ ರನ್ನು ಶಾಲುಹೊದಿಸಿ ಕೃತಜ್ಞತೆ ಸಲ್ಲಿಸಲಾಯಿತು.
ಎರಡು ಹೆಣ್ಣು ಮತ್ತು ಒಂದು ಗಂಡು ಮಗುವಿನ ಪುಟ್ಟ ಸಂಸಾರ ನಡೆಸುತ್ತಿರುವ ಹರೀಶ್ ಮತ್ತು ವಸಂತಿ ದಂಪತಿಗೆ ಸೇರಿದವರು ಶುಭ ಹಾರೈಸಿದರು.




