ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ
ವಿಜಯಪುರ:ಕೌಟುಂಬಿಕ ಕಲಹ ಹಿನ್ನೆಲೆ ಮಹಿಳೆಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವನಬಾಗೇವಾಡಿ ತಾಲೂಕಿನ ಉಕ್ಕಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರ ಭಾಗದಲ್ಲಿರೋ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ಮಹಿಳೆ ಮತ್ತು ಮಗುವೊಂದರ ಮೃತದೇಹಗಳು ಪತ್ತೆಯಾಗಿವೆ.
ಮೃತರನ್ನು ರೇಣುಕಾ ಅಮೀನಪ್ಪ ಕೋನಿನ್ (26 ), ಮತ್ತು ಎರಡು ಹಾಗೂ ಒಂದು ವರ್ಷದ ಹೆಣ್ಣು ಮಗು ಎಂದು ಗುರುತಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಗಂಡನ ಕುಟುಂಬಸ್ಥರೊಡನೆ ಜಗಳವಾಡಿದ್ದ ರೇಣುಕಾ ತನ್ನ ಇಬ್ಬರು ಹೆಣ್ಮಕ್ಕಳ ಜೊತೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ.
ಎರಡು ದಿನಗಳಿಂದ ರೇಣುಕಾ ಹಾಗೂ ಮಕ್ಕಳಿಗಾಗಿ ಆಕೆಯ ಗಂಡ ಅಮೀನಪ್ಪ ಕೋನಿನ್ ಮತ್ತು ಆತನ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಎಲ್ಲೂ ಸಿಗದ ಹಿನ್ನೆಲೆ ಕಾಣೆಯಾಗಿದ್ದಾರೆ ಎಂದು ಅಮೀನಪ್ಪ ಕೋನಿನ್ ಸೋಮವಾರ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.




