ಶ್ರದ್ಧಾ ಕೊಲೆ ಆರೋಪಿಯನ್ನು ಕರೆದೊಯ್ಯುವ ವಾಹನದ ಮೇಲೆ ಹಿಂದೂ ಕಾರ್ಯಕರ್ತರ ದಾಳಿ: ಇಬ್ಬರು ದಾಳಿಕೋರರು ಪೊಲೀಸ್ ವಶಕ್ಕೆ
ನವದೆಹಲಿ: ದೆಹಲಿಯ ಬುಲಂದ್ ಶಹರ್ ನಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ಹಿಂದು ಸೇನೆಯ ಕಾರ್ಯಕರ್ತರು ಸೋಮವಾರ ದಾಳಿ ನಡೆಸಿದ್ದಾರೆ.
ಪೋಲಿಗ್ರಾಫ್ ಪರೀಕ್ಷೆಯ ನಂತರ ಪೂನಾವಾಲಾನನ್ನು ಪಶ್ಚಿಮ ದೆಹಲಿಯ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ಕತ್ತಿಗಳನ್ನು ಹಿಡಿದಿದ್ದ ಕನಿಷ್ಠ ಇಬ್ಬರು ವ್ಯಕ್ತಿಗಳು ಪೊಲೀಸ್ ವ್ಯಾನ್ ಮೇಲೆ ದಾಳಿ ಮಾಡಿದ್ದಾರೆ.
ಎಫ್‌ಎಸ್‌ಎಲ್ ಕಟ್ಟಡದ ಹೊರಭಾಗದಲ್ಲಿ ಈ ದಾಳಿ ನಡೆದಿದ್ದು, ಕತ್ತಿ ಹಿಡಿದ ಇಬ್ಬರು ವ್ಯಾನ್ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಅಫ್ತಾಬ್ ಪೂನಾವಾಲಾ ಸುರಕ್ಷಿತವಾಗಿದ್ದಾನೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇನ್ನು ದಾಳಿಕೋರರನ್ನು ಬಂಧಿಸಿದ್ದು, ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.