ಆಧಾರ್ ಪೂನಾವಾಲ ಹೆಸರಿನಲ್ಲಿ ಕೋಟಿ ರೂ. ವಂಚನೆ: 7 ಮಂದಿ ಆರೋಪಿಗಳ ಬಂಧನ
ಪುಣೆ: ಕೊರೊನಾ ಲಸಿಕೆ ತಯಾರಕಾ ಕಂಪೆನಿ ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲ ಅವರ ಹೆಸರಿನಲ್ಲಿ 1.01 ಕೋಟಿ ರೂ. ವಂಚನೆ ಪ್ರಕರಣ ಸಂಬಂಧಿಸಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು, ಇನ್ನೂ ಆರೋಪಿಗಳ ಎಲ್ಲಾ ಖಾತೆಗಳನ್ನು ಹಾಗೂ 40 ಇತರ ಖಾತೆಗಳನ್ನು ಜಪ್ತಿ ಮಾಡಲಾಗಿದೆ. 13 ಲಕ್ಷ ರೂ.ಗಳನ್ನು ಆರೋಪಿಗಳ ಖಾತೆಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.
ಏಳು ಖಾತಾ ಸಂಖ್ಯೆಗಳ ಸಹಿತ ಆ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೀರಂ ನಿರ್ದೇಶಕರಲ್ಲೊಬ್ಬರಾದ ಸತೀಶ್ ದೇಶಪಾಂಡೆ ಅವರಿಗೆ ಸಿಇಓ ಆಧಾರ್ ಪೂನಾವಾಲ ಹೆಸರಿನಲ್ಲಿ ವಾಟ್ಸಾಪ್‌ನಲ್ಲಿ ಸಂದೇಶ ಬಂದಿದ್ದು, ಆ ಸಂದೇಶದ ಪ್ರಕಾರ ಕಳೆದ ಸೆಪ್ಟಂಬರ್‌ನಲ್ಲಿ ಏಳು ಖಾತೆಗಳಿಗೆ ಅವರು ಹಣ ಕಳುಹಿಸಿದ್ದಾರೆ. ಆದರೆ ಆ ಬಳಿಕ ಆಧಾರ್ ಪೂನಾವಾಲ ಅವರಿಂದ ಸಂದೇಶ ಬಂದಿರುವುದಲ್ಲ ಎಂದು ಖಾತ್ರಿಯಾಗಿ ಕೂಡಲೇ ಬಂಡ್ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.





