September 30, 2026

ಬಂಟ್ವಾಳ: ಕಾರಿನಲ್ಲಿ ಎಂಡಿಎಂಎ ಮತ್ತು ಗಾಂಜಾ ಸಾಗಾಟ: ಮೂವರು ಆರೋಪಿಗಳ ಬಂಧನ

0
image_editor_output_image505184495-1786640917747

ಬಂಟ್ವಾಳ: ಕಾರಿನಲ್ಲಿ ಎಂಡಿಎಂಎ ಮತ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ–ಪುಂಜಾಲಕಟ್ಟೆ–ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಮೂಲಕ ಸ್ವೀಪ್ಟ್ ಕಾರಿನಲ್ಲಿ ಮೂವರು ಅಪರಿಚಿತರು ನಿಷೇಧಿತ ಮಾದಕ ವಸ್ತುಗಳನ್ನು ಸಾಗಿಸುತ್ತಿರುವ ಬಗ್ಗೆ ಪೊಲೀಸ್ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ತನಿಖಾ ವಿಭಾಗದ ಪೊಲೀಸ್ ಉಪನಿರೀಕ್ಷಕ ರನ್ನಗೌಡ ಎಸ್. ಪಾಟೀಲ್ ನೇತೃತ್ವದ ತಂಡ ಆಲಂಪುರಿ ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಉದ್ಯಾನವನದ ಬಳಿ ಬುಧವಾರ ಸಂಜೆ ಕಾರ್ಯಾಚರಣೆ ನಡೆಸಿತು.

 

ಸಂಜೆ ಸುಮಾರು 6.50ಕ್ಕೆ ಬೆಳ್ತಂಗಡಿ–ಪುಂಜಾಲಕಟ್ಟೆ ಕಡೆಯಿಂದ ಬಂದ KA-19-MF-1227 ನೋಂದಣಿ ಸಂಖ್ಯೆಯ ಸ್ವೀಪ್ಟ್ ಕಾರು ಪೊಲೀಸರನ್ನು ಕಂಡು ವೇಗವಾಗಿ ಚಲಾಯಿಸಿದ್ದು, ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಸ್ವಲ್ಪ ಮುಂದೆ ಹೋಗಿ ನಿಂತಿದೆ. ಸಿಬ್ಬಂದಿ ಹಾಗೂ ಪಂಚರ ಸಹಾಯದಿಂದ ಕಾರನ್ನು ಸುತ್ತುವರಿದು ಪರಿಶೀಲಿಸಿದಾಗ ಮೂವರು ವ್ಯಕ್ತಿಗಳು ಪತ್ತೆಯಾಗಿದ್ದಾರೆ.

ಬಂಧಿತರನ್ನು ನಾಶೀರ್ ಹುಸೇನ್ (37), ಮಂಗಳೂರು ತಾಲೂಕು, ಮಹಮ್ಮದ್ ಜುನೈದ್ (38), ಗೋಳ್ತಮಜಲು, ಬಂಟ್ವಾಳ ತಾಲೂಕು ಹಾಗೂ ಮೊಹಮ್ಮದ್ ಅಫ್ರೀದಿ (24), ಮಂಗಳೂರು ತಾಲೂಕು ಎಂದು ಗುರುತಿಸಲಾಗಿದೆ.

ಪೊಲೀಸರ ವಿಚಾರಣೆ ವೇಳೆ ನಾಶೀರ್ ಹುಸೇನ್ ಅವರು ಸ್ನೇಹಿತರಾದ ಜುನೈದ್ ಮತ್ತು ಅಫ್ರೀದಿ ಅವರೊಂದಿಗೆ ಬೆಂಗಳೂರಿನಿಂದ ಅಪರಿಚಿತ ವ್ಯಕ್ತಿಯೊಬ್ಬರಿಂದ ಎಂಡಿಎಂಎ ಹಾಗೂ ಗಾಂಜಾ ಖರೀದಿಸಿ, ಶೇಖರಿಸಿಟ್ಟು ಗಿರಾಕಿಗಳಿಗೆ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

22.57 ಗ್ರಾಂ ಎಂಡಿಎಂಎ ವಶ
ನಾಶೀರ್ ಹುಸೇನ್ ಅವರಿಂದ 11.26 ಗ್ರಾಂ ಎಂಡಿಎಂಎ, ₹41,225 ನಗದು ಹಾಗೂ ವಿವೋ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಮಹಮ್ಮದ್ ಜುನೈದ್ ಅವರಿಂದ 11.31 ಗ್ರಾಂ ಎಂಡಿಎಂಎ ಹಾಗೂ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊಹಮ್ಮದ್ ಅಫ್ರೀದಿ ಅವರಿಂದ 30.34 ಗ್ರಾಂ ಗಾಂಜಾ ಹಾಗೂ ರೆಡ್‌ಮಿ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಒಟ್ಟು 22.57 ಗ್ರಾಂ ಎಂಡಿಎಂಎ (ಅಂದಾಜು ಮೌಲ್ಯ ₹22,570) ಹಾಗೂ 30.34 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹1,517) ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ಸಾಗಾಟಕ್ಕೆ ಬಳಸಿದ್ದ ಸುಮಾರು ₹2 ಲಕ್ಷ ಮೌಲ್ಯದ ಸ್ವೀಪ್ಟ್ ಕಾರನ್ನೂ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಕಾರಿನ ಡ್ಯಾಶ್‌ಬೋರ್ಡ್ ಹಾಗೂ ಹಿಂಭಾಗದ ಡಿಕ್ಕಿಯನ್ನು ಪರಿಶೀಲಿಸಿದಾಗ ಯಾವುದೇ ಹೆಚ್ಚುವರಿ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಗದು, ಮಾದಕ ವಸ್ತುಗಳು, ಮೊಬೈಲ್‌ಗಳು ಹಾಗೂ ಕಾರು ಸೇರಿದಂತೆ ಒಟ್ಟು ₹2,87,312 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 112/2026ರಂತೆ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(ಸಿ) ಜೊತೆಗೆ 22(ಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!