ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ರಸ್ತೆ ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ
ಬೆಳ್ತಂಗಡಿ : ಶಿರಾಡಿ ರಸ್ತೆಯಾಗಿ ಪೆರಿಯ ಶಾಂತಿಯಿಂದ ಕೊಕ್ಕಡ ಮೂಲಕ ಧರ್ಮಸ್ಥಳವನ್ನು ಸೇರುವ ಹಾಗೂ ಚಾರ್ಮಾಡಿ ಮಾರ್ಗವಾಗಿ ಬಂದು ಉಜಿರೆಯಿಂದ ಧರ್ಮಸ್ಥಳಕ್ಕೆ ಸಾಗುವ ರಸ್ತೆಯು ಶೀಘ್ರ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ಬಾರಿ ಧರ್ಮಸ್ಥಳ ನೇತ್ರಾವತಿ ವರೆಗಿನ ಚತುಷ್ಪಥ ರಸ್ತೆ ಉದ್ಘಾಟನೆ ವೇಳೆ ಉಜಿರೆ-ಪೆರಿಯಶಾಂತಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಅಗತ್ಯದ ಬಗ್ಗೆ ಪ್ರಸ್ತಾವವನ್ನು ಸರಕಾರದ ಮುಂದಿಟ್ಟಿದ್ದರು.
ಇದೀಗ ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿಯನ್ನು ಸಂಪರ್ಕಿಸುವ ಉಜಿರೆಯಿಂದ ಪೆರಿಯಶಾಂತಿ ವರೆಗಿನ 30 ಕಿ.ಮೀ. ವ್ಯಾಪ್ತಿಯನ್ನು ರಾ.ಹೆ.-73ರ ಸ್ಪರ್ ರಸ್ತೆಯಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ. ರಸ್ತೆಯನ್ನು ರಾಜ್ಯ ಹೆದ್ದಾರಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.




