ಸ್ನೇಹಿತನ ಹುಟ್ಟುಹಬ್ಬ ಆಚರಿಸಿ: ಸ್ನಾನಕ್ಕಿಳಿದ ವಿದ್ಯಾರ್ಥಿಗಳು: ನೀರಿನಲ್ಲಿ ಮುಳುಗಿ 5 ವಿದ್ಯಾರ್ಥಿಗಳು ಸಾವು
ಮಧ್ಯಪ್ರದೇಶ: ಸ್ನಾನಕ್ಕಿಳಿದ 5 ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಕಟ್ನಿ ನದಿಯ ದಡದಲ್ಲಿ ನಡೆದಿದ್ದು, ಮೂವರು ಮಕ್ಕಳ ಮೃತದೇಹವನ್ನು ಹೊರತೆಗೆಯಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಮೃತ ಮಕ್ಕಳನ್ನು ದೇವ್ರ ಖುರ್ದ್ ನಿವಾಸಿ ಮಹಪಾಲ್ ಸಿಂಗ್ (15), ಸಾಹಿಲ್ ಚಕ್ರವರ್ತಿ (15), ಸೂರ್ಯ ವಿಶ್ವಕರ್ಮ (15), ಆಯುಷ್ ವಿಶ್ವಕರ್ಮ (13) ಮತ್ತು ಅನುಜ್ ಸೋನಿ (13) ಎಂದು ಗುರುತಿಸಲಾಗಿದೆ.
ಮೃತರಲ್ಲಿ ಒರ್ವ ಬಾಲಕ ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಇವರೆಲ್ಲರೂ ಕಟ್ನಿ ನದಿಯ ದಡದಲ್ಲಿ ವಿಹಾರಕ್ಕೆ ಹೋಗಿದ್ದರು. ಸಂಜೆಯಾದರೂ ಮಕ್ಕಳು ವಾಪಸ್ ಬಾರದೆ ಇದ್ದಾಗ ಕುಟುಂಬದವರು ಹುಡುಕಾಟ ನಡೆಸಿದ್ದಾರೆ. ನದಿ ದಡದಲ್ಲಿ ಮಕ್ಕಳ ಬಟ್ಟೆ ಬಿದ್ದಿರುವುದು ಕಂಡು ಬಂದಿದ್ದು, ಗ್ರಾಮಸ್ಥರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಯ ಮಾಹಿತಿ ತಿಳಿದ ತಕ್ಷಣ ಆಡಳಿತಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.




