ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ: ಸಮಾವೇಶ ನಡೆದ ಜಾಗದಲ್ಲಿ ಬಿದ್ದಿದ್ದ ಕಸ ಸ್ವಚ್ಛಗೊಳಿಸಿದ ಸಚಿವ ಶ್ರೀರಾಮುಲು
ಬಳ್ಳಾರಿ: ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆಯ ಸಮಾವೇಶ ನಡೆದ ಜಾಗದಲ್ಲಿ ಬಿದ್ದಿದ್ದ ಕಸವನ್ನು ಸಚಿವ ಶ್ರೀರಾಮುಲು, ಬಳ್ಳಾರಿ ನಗರ ಶಾಸಕರ ಸೋಮಶೇಖರ ರೆಡ್ಡಿ ಹಾಗೂ ಮಾಜಿ ಸಂಸದೆ ಜೆ. ಶಾಂತಾ ಸೇರಿದಂತೆ ಹಲವರು ಸೇರಿ ಸ್ವಚ್ಚಗೊಳಿಸಿದರು.
ಮುನಿಸಿಪಲ್ ಕಾಲೇಜಿನ ಮೈದಾನದಲ್ಲಿ ಅಕ್ಟೋಬರ್ 15ರಂದು ಕಾಂಗ್ರೆಸ್‌ನ ಬೃಹತ್ ಸಮಾವೇಶ ನಡೆದಿತ್ತು. ಸಮಾವೇಶದ ನಂತರ ಮೈದಾನದಲ್ಲಿ ಕಸದ ರಾಶಿ ಬಿದ್ದಿದ್ದು, ಭಾನುವಾರ ಮಧ್ಯಾಹ್ನದ ವೇಳೆಗೆ ಸಚಿವ ಶ್ರೀರಾಮುಲು ಸಹಿತ ನಾಯಕರು ಕಸ ಗುಡಿಸಿ ಸ್ವಚ್ಚಗೊಳಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್‌ನವರು ಮೈದಾನದಲ್ಲಿ ಹೊಲಸು ಮಾಡಿದ್ದಾರೆ. ಆದರೆ ಸೋಮವಾರ ಕಾಲೇಜಿನಲ್ಲಿ ತರಗತಿ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಮತ್ತು ರಾಜಕಾರಣಿಗಳ ಬಗ್ಗೆ ಅವರಲ್ಲಿ ಕೆಟ್ಟ ಅಭಿಪ್ರಾಯ ಮೂಡಬಾರದೆಂಬ ಕಾರಣಕ್ಕಾಗಿ ಸ್ವಚ್ಚತೆ ಮಾಡಲಾಗಿದೆ. ಪ್ರಧಾನಿಯವರ ಸ್ವಚ್ಚ ಭಾರತ್ ಅಭಿಯಾನದ ಭಾಗವಾಗಿ ಈ ಕೆಲಸ ನಮ್ಮಿಂದ ಆಗಿದೆ. ಕಸ ಹಾಕಿದ ಅವರೇ ಈ ಕೆಲಸ ಮಾಡಬೇಕಿತ್ತು. ಆದರೆ ನಾವು ಮಾಡಿದ್ದೇವೆ ಎಂದರು.




