February 2, 2026

ಕೇರಳ ರಾಜ್ಯದಲ್ಲಿ ಇಬ್ಬರು ಮಹಿಳೆಯರ ನರಬಲಿ ಪ್ರಕರಣ: ಮೃತದೇಹಗಳ ಅಂಗಾಂಗಗಳನ್ನೂ ತಿಂದಿರುವ ಆರೋಪಿಗಳು? ಈ ಬಗ್ಗೆ ಕೊಚ್ಚಿ ಪೊಲೀಸ್ ಆಯುಕ್ತ ನಾಗರಾಜು ಹೇಳಿದ್ದೇನು!

0
image_editor_output_image1960885978-1665576303585

ಎರ್ನಾಕುಳಂ:  ಕೇರಳದ ಪತನಂತಿಟ್ಟ ಜಿಲ್ಲೆಯಲ್ಲಿ ಆರ್ಥಿಕ ಮುಗ್ಗಟ್ಟು ಪರಿಹಾರದ ಹೆಸರಿನಲ್ಲಿ ಇಬ್ಬರು ಮಹಿಳೆಯರನ್ನು ನರಬಲಿ ಕೊಟ್ಟ ಪ್ರಕರಣದ ಹಿಂದೆ ಸಾಕಷ್ಟು ನಿಗೂಢ ಸಂಗತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ನರಬಲಿ ನೀಡಿದ ನಂತರ ಮೃತದೇಹಗಳ ಅಂಗಾಂಗಗಳನ್ನೂ ಆರೋಪಿಗಳು ತಿಂದಿರುವ ಶಂಕೆಯೂ ಇದೆ ಎಂದು ಕೊಚ್ಚಿ ಪೊಲೀಸರು ಹೇಳಿದ್ದಾರೆ. ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆಯ ಮೃತದೇಹವನ್ನು 56 ಭಾಗವಾಗಿಸಿ ತಿಂದಿದ್ದಾರೆ ಎಂಬುದಾಗಿ ಸ್ವತಃ ಆರೋಪಿಗಳು ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿರುವ ಕೊಚ್ಚಿ ಪೊಲೀಸ್ ಆಯುಕ್ತ ನಾಗರಾಜು, ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲಾಗಿದ್ದು, ಯಾವ ಮಾಹಿತಿಯೂ ಖಚಿತವಾಗಿ ಲಭಿಸಿಲ್ಲ. ಮೇಲ್ನೋಟಕ್ಕೆ ಇದೊಂದು ನರಭಕ್ಷಕ ಪ್ರಕರಣದಂತೆ ಕಾಣುತ್ತಿದೆ. ನರಬಲಿ ಕೊಟ್ಟ ನಂತರ ಶವದ ಅಂಗಾಂಗಗಳನ್ನು ತಿಂದಿದ್ದಾರೆ. ಈ ಕುರಿತು ಆರೋಪಿಗಳಲ್ಲೋರ್ವಳಾದ ಲೈಲಾ ಬಾಯ್ಬಿಟ್ಟಿದ್ದು, ಆರ್ಥಿಕ ಏಳಿಗೆಗಾಗಿ ರೋಸ್‌ಲಿನ್ ಳ ದೇಹವನ್ನು ಕತ್ತರಿಸಿ ಅಡುಗೆ ಮಾಡಿ ತಿಂದಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.

ಮಹಿಳೆಯರನ್ನು ಕತ್ತು ಸೀಳಿ ಕೊಂದ ನಂತರ ಅವರ ಗುಪ್ತಾಂಗಗಳನ್ನು ಕತ್ತರಿಸಿ ಮನೆಗೆ ರಕ್ತವನ್ನು ಸಿಂಪಡಿಸಿದ್ದರು ಎಂಬುದನ್ನು ಸ್ವತಃ ಬಂಧಿತ ಆರೋಪಿಗಳೇ ಬಾಯ್ಬಿಟ್ಟಿದ್ದಾರೆ ಎಂದೂ ತಿಳಿದು ಬಂದಿದೆ. ಸದ್ಯ ಮೂವರು ಆರೋಪಿಗಳನ್ನೂ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೊಚ್ಚಿಯಲ್ಲಿ ಲಾಟರಿ ಮಾರಿ ಜೀವನ ನಡೆಸುತ್ತಿದ್ದ ರೋಸ್ಲಿನ್ (50) ಮತ್ತು ಪದ್ಮಾ (52) ಎಂಬವರು ಕ್ರಮವಾಗಿ ಜೂನ್ ಹಾಗೂ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿರುವ ಬಗ್ಗೆ ಪ್ರತ್ಯೇಕವಾಗಿ ದೂರು ದಾಖಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಶಫಿ ವಿಕೃತಕಾಮಿಯಾಗಿದ್ದ. ಭಗವಂತ್ ಸಿಂಗ್ ಮತ್ತು ಲೈಲಾ ದಂಪತಿಗೆ ಆರ್ಥಿಕ ಮುಗ್ಗಟ್ಟು ಪರಿಹಾರ ಕಾಣಲು ಶಫಿ ಎಂಬಾತನ ನೆರವಿನೊಂದಿಗೆ ನರಬಲಿ ನೀಡುವ ನಿರ್ಧಾರಕ್ಕೆ ಬಂದಿದ್ದರು. ಹಲವಾರು ಪ್ರಕರಣಗಳ ಆರೋಪಿಯಾಗಿರುವ ಶಫಿ ಪುಥೆನ್ ಕ್ರುಝ್ ಎಂಬಲ್ಲಿ ಮಹಿಳೆಗೆ ಕಿರುಕುಳ ನೀಡಿ ಎರಡು ವರ್ಷದ ಹಿಂದೆ ಬಂಧನಕ್ಕೊಳಗಾಗಿ ಕಳೆದ ವರ್ಷ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಮಂತ್ರವಾದಿಯಂತೆ ಪೋಸ್ ಕೊಡುತ್ತಾ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅಶ್ಲೀಲ ಸಿನಿಮಾಗಳಲ್ಲಿ ನಟಿಸಲು ಅವಕಾಶ ಕಲ್ಪಿಸುವ ಆಮಿಷವೊಡ್ಡಿ ಇಬ್ಬರು ಮಹಿಳೆಯರನ್ನು ಭಗವಂತ್ ಸಿಂಗ್ ಮತ್ತು ಲೈಲಾ ಮನೆಗೆ ಆತ ಕರೆ ತಂದಿದ್ದು, ಅಲ್ಲಿ ಬಲವಂತದಿಂದ ಕೂಡಿ ಹಾಕಿದ್ದ. ಬಳಿಕ ಮಹಿಳೆಯರ ದೇಹವನ್ನು ಕತ್ತರಿಸಿ ಕೊಲೆ ಮಾಡಲಾಗಿತ್ತು ಎಂದು ಕೊಚ್ಚಿ ಪೊಲೀಸ್ ಆಯುಕ್ತ ನಾಗರಾಜು ತಿಳಿಸಿದ್ದಾರೆ.

ಶಫಿ ಭಾಗಿಯಾಗಿರುವ ಹಲವು ನಿಗೂಢ ಪ್ರಕರಣಗಳ ಕುರಿತು ಕೂಡಾ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!