ನಟ ಜೋಜು ಜಾರ್ಜ್ ಕಾರು ಧ್ವಂಸ:
ಕೊಚ್ಚಿ ಮಾಜಿ ಮೇಯರ್ ಸಹಿತ ಮೂವರು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಮುಂದೆ ಶರಣು
ಕೊಚ್ಚಿ: ಇಂಧನ ಬೆಲೆ ಏರಿಕೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಪಕ್ಷದ ಕಾರ್ಯಕರ್ತರು ರಸ್ತೆ ತಡೆ ಪ್ರಶ್ನಿಸಿದ ನಟ ಜೋಜು ಜಾರ್ಜ್ ಅವರ ಕಾರನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ ಕೊಚ್ಚಿ ಮಾಜಿ ಮೇಯರ್ ಟೋನಿ ಚಮ್ಮನಿ ಹಾಗೂ ಕಾಂಗ್ರೆಸ್ ಪಕ್ಷದ ಮೂವರು ಜಿಲ್ಲಾ ಮುಖಂಡರು ಸೋಮವಾರ ಪೊಲೀಸರಿಗೆ ಶರಣಾದರು.
ಚಮ್ಮನಿ ಅವರಲ್ಲದೆ, ಜಾರ್ಜಸ್, ಮನು ಜೇಕಬ್ ಮತ್ತು ಜೋಸೆಫ್ ಕೂಡ ಶರಣಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 22 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರ ಜೊತೆ ಪೊಲೀಸ್ ಠಾಣೆಗೆ ಆಗಮಿಸಿ ಠಾಣೆಯ ಮುಂದೆ ನಟನ ಪ್ರತಿಕೃತಿ ದಹಿಸಿದರು. ಇನ್ನು ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ತಲೆಮರೆಸಿಕೊಂಡಿದ್ದಾರೆ. ಸಿಸಿಟಿವಿ ಮತ್ತು ಇತರ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಶೆರಿಫ್ ವಾಜಕ್ಕಳ ಮತ್ತು ಪಿ ಜಿ ಜೋಸೆಫ್ ಎಂಬ ಇಬ್ಬರು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು.





