ಮಗಳ ಮೃತದೇಹವನ್ನು ಉಪ್ಪು ತುಂಬಿದ ಹೊಂಡದಲ್ಲಿ 44 ದಿನಗಳ ಕಾಲ ಮುಚ್ಚಿಟ್ಟ ತಂದೆ: ಕಾರಣವೇನು ಗೊತ್ತೇ?
ಮಹಾರಾಷ್ಟ್ರ: ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯ ವ್ಯಕ್ತಿಯೊಬ್ಬ, ತನ್ನ ಮಗಳ ಶವವನ್ನು ತನ್ನ ಕೃಷಿ ಜಮೀನಿನಲ್ಲಿ ಉಪ್ಪು ತುಂಬಿದ ಹೊಂಡದಲ್ಲಿ 44 ದಿನಗಳ ಕಾಲ ಮುಚ್ಚಿಟ್ಟು ಮರು ಮರಣೋತ್ತರ ಪರೀಕ್ಷೆಯಾಗಬೇಕೆಂದು ಪಟ್ಟು ಹಿಡಿದ ಘಟನೆ ಮಹಾರಾಷ್ಟ್ರದ ನಂದೂರ್‌ಬಾರ್ ನಲ್ಲಿ ನಡೆದಿದೆ.
ನಂದೂರ್ಬಾರ್ ಜಿಲ್ಲೆಯ 21 ವರ್ಷದ ಯುವತಿ ಆಗಸ್ಟ್ 1 ರಂದು ತನ್ನ ಮನೆಯಿಂದ 20 ಕಿಮೀ ದೂರದಲ್ಲಿರುವ ಮತ್ತೊಂದು ಕುಗ್ರಾಮವಾದ ವಾವಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಗ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಯುವತಿಯದ್ದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ ಮಗಳನ್ನು ನಾಲ್ವರು ಅತ್ಯಾಚಾರ ಮಾಡಿದ್ದರಿಂದ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬ ದೂರಿದೆ.
” ಆತ್ಮಹತ್ಯೆ ಕೇಸ್ ದಾಖಲಿಸಲಾಗಿದ್ದು , ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಶವ ಸಂಸ್ಕಾರ ಮಾಡುವ ಬದಲು ಸಂರಕ್ಷಿಸಲು ನಿರ್ಧರಿಸಿದ್ದಾರೆ.
ಕುಟುಂಬದ ಒತ್ತಾಯದ ಮೇರೆಗೆ ಮೃತದೇಹದ ಮರು ಮರಣೋತ್ತರ ಪರೀಕ್ಷೆಗೆ ಪೊಲೀಸರು ಒಪ್ಪಿದ್ದು, ಶುಕ್ರವಾರ ಮತ್ತೊಮ್ಮೆ ಪರೀಕ್ಷೆ ಮಾಡಲಾಗಿದೆ.




