September 19, 2024

ಸಂಬಂಧಗಳ ಮುರಿತಗಳೇ ವಿರೋಧಿಗಳ ಸೃಷ್ಟಿ: ಲೇಖನ: ರಾಧಾಕೃಷ್ಣ ಎ
ಆಡಳಿತಾಧಿಕಾರಿ
ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆ ವಿಟ್ಲ.

0

ಪದರ ಪದರಗಳಿಹವು ಗಂಟು ಗಂಟು ಗಳಿಹವು ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ ||ಇದಮಿತ್ತಮೆಲ್ಲಿಹುದು ಮನುಜ ಸ್ವಭಾವದಲಿ?|ವಿಧಿಯ ಕೈ ಚಿತ್ರವದು  ಮಂಕುತಿಮ್ಮ. ಮನುಷ್ಯನ ಬದುಕೆಂಬ ಹಾದಿಯಲಿ ಜಂಜಾಟಗಳು ಹಲವು, ವ್ಯಾಮೋಹಗಳು ಕೆಲವು. ನೋವು ನಲಿವುಗಳ ಒಡನೆ ಹೋರಾಟ, ಭೌತಿಕ -ಮಾನಸಿಕ ತಾಕಲಾಟಗಳು ಕೊನೆಯಿರದ ಚೀರಾಟಗಳು. ಎಲ್ಲದಕ್ಕೂ ಮೂಲ ಕಾರಣ ಮನುಷ್ಯ ಸ್ವಭಾವದಿಂದಲೇ. ಇದು ಅಂತ್ಯವಿಲ್ಲದ, ವಾಸ್ತವಿಕತೆಗೆ ನಿಲುಕದ ಹೇಳಿಕೆ ಅಷ್ಟೇ. ಇದಕ್ಕೆ ಬ್ರಹ್ಮ ಚಿತ್ತ ಕಾರಣವೆಂದು ಕೈ ಕಟ್ಟಿ ಕುಳಿತರೆ ದ್ವೇಷ, ವಿರೋಧಾಭಾಸ ಸ್ಥಾಯಿಯಾಗಿ ಉಳಿಯುವುದಲ್ಲದೆ ಸಮಭಾವುಕರಾಗುವ ಸಾಧ್ಯತೆಯ ಬಗ್ಗೆ ಚಿಂತೆ ಮಾಡಬೇಕಾಗಿದೆ.
ಸಂಸ್ಕೃತ ಶ್ಲೋಕ ಹೇಳುತ್ತದೆ,
“ತಾವತ್ ಪ್ರೀತಿರ್ಭವೇ ತ್ ಲೋಕೇ       ಯಾವತ್ ದಾನಂ ಪ್ರದೀಯತೇ
ವತ್ಸ: ಕ್ಷೀರ ಕ್ಷಯಂ ದೃಷ್ಟ್ವಾ
ಪರಿತ್ಯಜತಿ ಮಾತರಂ”
ನಾವು ಎಷ್ಟು ಕಾಲ ದಾನ ಮಾಡುತ್ತಾ ಇರುತ್ತೇವೆಯೋ ಅಷ್ಟು ಸಮಯ ಜನರು ನಮ್ಮೊಂದಿಗೆ ಪ್ರೀತಿಯನ್ನು ತೋರಿಸುತ್ತಾರೆ. ನಂತರ  ಕರು/ಮಗು ಹಾಲು ಕುಡಿಯುವುದನ್ನು ಬಿಟ್ಟ ಮೇಲೆ ತಾಯಿಯನ್ನು ದೂರ ಮಾಡುವಂತೆ ಜನರೂ ನಮ್ಮಿಂದ ದೂರವಾಗಿ ಬಿಡುತ್ತಾರೆ”. ಯೋಚಿಸ ಬೇಕಾದ ಅಂಶವೇನೆಂದರೆ ನಾವ್ಯಾಕೆ ಇಷ್ಟು ಸ್ವಾರ್ಥಿಗಳಾಗುತ್ತೇವೆ? ಎನ್ನುವುದು. ಇದು ಸಾಮಾನ್ಯವಾಗಿ ಕಂಡರೂ ಪ್ರತಿಯೊಬ್ಬರಲ್ಲೂ ಪ್ರತಿಯೊಂದರಲ್ಲೂ ಕಾಣುವ, ಭಾವನೆಗಳನ್ನು ಕೆದಕುವ, ಬಾಂಧವ್ಯವನ್ನು ಬಿರುಕಾಗಿಸುವ ಸತ್ಯ ಹೃದಯ ಕಲಕುತ್ತದೆ. ಇದು ಒಂದು ಕುಟುಂಬ, ಸಮಾಜ, ರಾಜ್ಯ, ದೇಶ ವನ್ನೇ ಒಡೆದ ಸಣ್ಣ ಕಿಡಿಯಲ್ಲವೇ? ಈ ದ್ವೇಷದ, ಅವಿಶ್ವಾಸದ,ತಾರತಮ್ಯದ,ಸ್ವಾರ್ಥ ಸ್ವಭಾವದಿಂದ ನಾವಾಗಿಯೇ  ಸಹನಾಮಯಿಗಳಾಗಿ ಬಿರಿದ ಮನಗಳ ಒಟ್ಟಾಗಿಸುವ ಯತ್ನ ಮಾಡಬಾರದೆ? ಮನೆ- ಮನದೊಳಗಣ ಬೇಗುದಿಗೆ ಸರಕಾರದ, ರಾಜಕೀಯತೆಯ, ಸಮಾಜವಾದಿಗಳ ಛತ್ರ ಬೇಕೇ?
“ಆತುರೇ ವ್ಯಸನೇ ಪ್ರಾಪ್ತಿ, ದುರ್ಭೀಕ್ಷೇ ಶತ್ರು ಸಂಕಟೇ, ರಾಜಾದ್ವಾರೇ ಸ್ಮಶಾನೆ ಚ ಯಸ್ತಿಷ್ಟತಿ ಸ:ಭಾಂದವ:”
ಆತುರದಲ್ಲಿ, ದುಃಖದಲ್ಲಿ, ಬಡತನದಲ್ಲಿ, ಶತ್ರುಗಳ ಮಧ್ಯದಲ್ಲಿ, ರಾಜಸುಖದಲ್ಲಿ ಸ್ಮಶಾನದಲ್ಲಿ ಯಾರು ನಮ್ಮ ಜೊತೆಗೆ ಇರುತ್ತಾರೋ ಅವರೇ ನಿಜವಾದ ಬಂಧು.

ಸರ್ವವನ್ನು ತ್ಯಾಗ ಮಾಡಿ ದೇವರಂತೆ ನಮ್ಮೊಡನೆ ವ್ಯವಹಾರ ಮಾಡಿಕೊಂಡಿದ್ದ ನಮ್ಮ ಹೆತ್ತವರು, ಪ್ರಿಯರು, ವ್ಯವಹಾರ ಬಂಧುಗಳು, ಸಹೋದ್ಯೋಗಿಗಳು, ಕುಟುಂಬಸ್ಥರು ಪ್ರೀತಿಯ ಸೆಳೆಯಿಂದ ಸಿಡಿದು ನಮ್ಮ ಶತ್ರುಗಳಾಗಿರುವುದೇ ಹೆಚ್ಚು. ಹಣದಾಹ, ಆಸ್ತಿ ಅಂತಸ್ತುಗಳ ಮೋಹ, ಪ್ರೀತಿ -ಪ್ರೇಮ, ವಾಕ್ಕಲಹ,ಉದ್ಯೋಗದ ಸೆಣಸಾಟ, ಇವುಗಳು ವಿರೋಧಿಗಳ ಸೃಷ್ಟಿಗೆ ಕಾರಣವಾಗುವವುಗಳಲ್ಲವೆ?

ಒಂಟಿ ಜೀವನ ಮನುಷ್ಯನಿಗೆ ಅಸಾಧ್ಯ. ಸರಳ ಜೀವನ, ಇದ್ದುದರಲ್ಲೇ ಬದುಕು, ನೆಮ್ಮದಿ, ಅವಿಶ್ರಾಂತ, ಸ್ವತಂತ್ರ ಬದುಕು ಬದುಕಿಸುತ್ತದೆ. ನೀಡುವವರ, ದಾಸ್ಯತನವನ್ನಾಗಿಸುವರ ಹಿತಶತ್ರುಗಳ ಬಲೆಗೆ ಸಿಲುಕದಿರಿ. ವಿನಾಕಾರಣ ಪಾರತಂತ್ರ್ಯಕ್ಕೆ ಒಳಗಾಗದಿರಿ. ಕಾಲ ಬಂದಾಗ ನೋಡೋಣ ಎಂಬ ನಿಮ್ಮ ಔದಾಸೀನ್ಯ ನಿಮ್ಮ ಕೀರ್ತಿಯನ್ನು ಕಬಳಿಸಬಹುದಾಗಿದೆ. ಇವುಗಳೆಲ್ಲವೂ ಶತ್ರುಗಳ ಸೃಷ್ಟಿಗೆ ಕಾರಣವಾಗುವವುಗಳು.

ಯಥಾ ಚಿತ್ತಂ ತಥಾ ವಾಚಃ
ಯಥಾ ವಾಚಃ ತಥಾ ಕ್ರಿಯಾಃ।
ಚಿತ್ತೇ ವಾಚಿ ಕ್ರಿಯಾಯಾಂ ಚ ಸಾಧೂನಾಮೇಕರೂಪತಾ ||

ಮನಸ್ಸು, ಮಾತು, ಕೃತಿಗಳಲ್ಲಿ ಮಹಾತ್ಮರು ಏಕರೂಪರು. ಅವರು ಚಿಂತಿಸಿದ್ದನ್ನು ಆಡುತ್ತಾರೆ, ಆಡಿದ್ದನ್ನು ಮಾಡಿ ತೋರಿಸುತ್ತಾರೆ. ಮನಸ್ಸಿನಲ್ಲಿದ್ದಂತೆಯೇ ಮಾತಾಡುವದು. ತಾವು ಆಡಿದ ಮಾತಿನಂತೆಯೇ ನಡೆಯುವುದು ಸಜ್ಜನರ ಸಹಜ ಸ್ವಭಾವ. ಮನಸ್ಸು ಮಾತು ಮತ್ತು ಕ್ರಿಯೆಗಳಲ್ಲಿ ಸಜ್ಜನರು ಒಂದೇ ತೆರನಾಗಿರುತ್ತಾರೆ. ದುರ್ಜನರಂತೆ ಮತಿಯೊಂದು, ಮಾತೊಂದು, ಕೃತಿ ಎಂದೂ ವಿಭಿನ್ನವಾಗಿರುವುದಿಲ್ಲ.

ನನ್ನಾಸೆ ಏನೆಂದರೆ ಎಲ್ಲರೂ ಎಲ್ಲರೊಂದಿಗೂ ಪ್ರೀತಿಯಿಂದಿರೋಣ. ನಮ್ಮ ದ್ವಂದ್ವತೆಗಳನ್ನು ನಾವೇ ಪರಿಹರಿಸಿಕೊಂಡು ಶತೃತ್ವಗಳನ್ನು ಮರೆಯೋಣ. ಇಲ್ಲಿ ಜಾತಿ,ಮತ, ಧರ್ಮಗಳ ಬಿಟ್ಟು ಮನುಷ್ಯರಾಗೋಣ ಅಷ್ಟೇ.ಇದುವೇ ಸ್ವತಂತ್ರ ಬದುಕು, ಸ್ವಾತಂತ್ರ್ಯದ ಬದುಕು.

Leave a Reply

Your email address will not be published. Required fields are marked *

error: Content is protected !!