ಅಕ್ರಮ ಪಟಾಕಿ ಘಟಕದಲ್ಲಿ ಭಾರೀ ಸ್ಫೋಟ: ಇಬ್ಬರು ಮಕ್ಕಳು, ಮಹಿಳೆ ಸೇರಿದಂತೆ ಐವರು ಸಾವು ನಾಲ್ವರಿಗೆ ಗಾಯ
ಬಿಹಾರ: ಬಿಹಾರದ ಸರನ್ ಜಿಲ್ಲೆಯಲ್ಲಿ ಅಕ್ರಮ ಪಟಾಕಿ ಘಟಕದಲ್ಲಿ ಭಾನುವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಇಬ್ಬರು ಮಕ್ಕಳು ಮತ್ತು ಮಹಿಳೆ ಸೇರಿದಂತೆ ಕನಿಷ್ಠ ಐವರು ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟವು ಎಷ್ಟು ಪ್ರಬಲವಾಗಿದೆ ಎಂದರೆ ಅಕ್ರಮ ಪಟಾಕಿ ಕಾರ್ಖಾನೆ ಇದ್ದ ಖೋಡೈಬಾಗ್ ಬಜಾರ್‌ನಲ್ಲಿನ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ ಎಂದು ಸರನ್ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಮನೆಯೊಳಗೆ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡಿರುವ ಶಂಕೆ ಇದೆ ಎಂದು ಅವರು ಹೇಳಿದ್ದಾರೆ.
ಸ್ಥಳದಲ್ಲಿಯೇ ಮೃತಪಟ್ಟವರ ಪೈಕಿ ಅಕ್ರಮ ಕಾರ್ಖಾನೆಯ ಮಾಲೀಕ 22 ವರ್ಷದ ಶಬೀರ್ ಹುಸೇನ್ ಸಹ ಇದ್ದಾರೆ ಎಂದು ತಿಳಿದು ಬಂದಿದೆ.
ಮೃತರಲ್ಲಿ 35 ವರ್ಷದ ಮುಲಾಜಿಮ್, 32 ವರ್ಷದ ಶಬಾನಾ ಖಾತೂನ್ ಮತ್ತು ಐದು ವರ್ಷದ ಶಾಜಾದ್ ಸೇರಿದ್ದಾರೆ. ಘಟನೆಯಲ್ಲಿ ಸಾವಿಗೀಡಾಗಿರುವ ನಾಲ್ಕು ವರ್ಷದ ಇನ್ನೊಂದು ಮಗುವಿನ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಇತರ ನಾಲ್ವರಲ್ಲಿ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಉತ್ತಮ ಚಿಕಿತ್ಸೆಗಾಗಿ ಪಾಟ್ನಾಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.