December 19, 2025

2022 ಫೆಬ್ರವರಿ 18 ರಿಂದ 27 ವರೆಗೆ
ಕಾಜೂರು ಮಖಾಂ ಶರೀಫ್ ಉರೂಸ್

0
IMG-20211105-WA0018.jpg

ಬೆಳ್ತಂಗಡಿ: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಸರ್ವ ಧರ್ಮೀಯರ ಸೌಹಾರ್ದತೆಯ ಸಮನ್ವಯ ಧಾರ್ಮಿಕ ಶ್ರದ್ಧಾ ಕೇಂದ್ರ ಕಾಜೂರು ಮಖಾಂ ಶರೀಫ್ ಇದರ ಮುಂದಿನ ಸಾಲಿನ ಉರೂಸ್ ಮಹಾ ಸಂಭ್ರಮ 2022 ನೇ ಫೆಬ್ರವರಿ18 ರಿಂದ 27 ರ ವರೆಗೆ ನಡೆಯಲಿದೆ ಎಂದು ಕಾಜೂರು ದರ್ಗಾ ಶರೀಫ್ ಗೌರವಾಧ್ಯಕ್ಷ, ಹಿರಿಯ ಧಾರ್ಮಿಕ ವಿದ್ವಾಂಸ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ದಿನಾಂಕ ಘೋಷಿಸಿದ್ದಾರೆ.

ಕಾಜೂರು ಮತ್ತು ಕಿಲ್ಲೂರು ಉಭಯ ಜಮಾಅತ್ ಗಳ ಉರೂಸ್ ಸಮಿತಿ ಸಭೆಯ ಬಳಿಕ ಜಂಟಿ ಸಮಿತಿ ನಿಯೋಗ ಕುಂಬೋಳ್ ತಂಙಳ್ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ ವೇಳೆ ಅವರು ಅಂತಿಮ‌ ದಿನಾಂಕ ನಿಗದಿಗೊಳಿಸಿ ತೀರ್ಮಾನ ಪ್ರಕಟಿಸಿದರು.

ಈ ವೇಳೆ ಮಾತನಾಡಿದ ಕುಂಬೋಳ್ ತಂಙಳ್ ಅವರು, ಕರ್ನಾಟಕ ಅಲ್ಲದೆ ಕೇರಳವನ್ನೊಳಗೊಂಡಂತೆ ಉತ್ತರ ಮಲಬಾರ್ ಪ್ರದೇಶದಲ್ಲಿ ಪ್ರಸಿದ್ಧಿ ಪಡೆದಿರುವ, ಬಹು ಪುರಾತನ ಕಾಲದಿಂದಲೇ ಎಲ್ಲಾ ಜಾತಿ ಧರ್ಮ ಭಾಷಿಗರು ಒಟ್ಟು ಸೇರುವ ಮತೀಯ ಸೌಹಾರ್ದತೆಯ ಸರ್ವಾಧರಣೀಯ ಕ್ಷೇತ್ರವಾಗಿದೆ ಕಾಜೂರು. ಇಲ್ಲಿ ಆಯಾಯ ಕಾಲದ ಸಮಿತಿಗಳ ನೇತೃತ್ವದಲ್ಲಿ ಅಭಿವೃದ್ಧಿ ಯೋಜನೆಗಳು ಅನುಷ್ಟಾನಗೊಂಡು ಪ್ರಸ್ತುತ ಸಮಿತಿಯೂ ತೀವ್ರಗತಿಯಲ್ಲಿ ಕೆಲಸ ಕಾರ್ಯಗಳಿಗೆ ನಾಯಕತ್ವ ನೀಡುತ್ತಿರುವುದು ಸಂತಸದಾಯಕ. ಖಾಝಿ ಸಯ್ಯಿದ್ ಕೂರತ್ ತಂಙಳ್ ಮಾರ್ಗದರ್ಶನ, ಕಾಜೂರು ಶಿಕ್ಷಣ ಸಂಸ್ಥೆಗಳ‌ ಪ್ರಾಂಶುಪಾಲ ಸಯ್ಯಿದ್ ಕಾಜೂರು ತಂಙಳ್ ನಿರ್ದೇಶನದಂತೆ ಕ್ಷೇತ್ರದಲ್ಲಿ ಮದರಸ, ಬೋರ್ಡಿಂಗ್ ಮದರಸ, ಪಳ್ಳಿದರ್ಸ್, ಇಂಗ್ಲೀಷ್ ಮೀಡಿಯಂ ಸ್ಕೂಲ್, ಪ್ರೌಢ ಶಾಲೆ, ಮಹಿಳಾ ಶರೀಅತ್ ಕಾಲೇಜು ಮೊದಲಾದ ಸಮನ್ವಯ ಶಿಕ್ಷಣ ಸಂಸ್ಥೆಗಳು ಬೆಳೆದುಬಂದಿದ್ದು, ಇದನ್ನು ಇಲ್ಲಿನ ಔಲಿಯಾಗಳ ಚೈತನ್ಯ ಶಕ್ತಿಯ ಪ್ರೇರಣೆ ಪಡೆದು ಎಲ್ಲರೂ ಸೇರಿ ಇನ್ನಷ್ಟು ಅಭಿವೃದ್ಧಿ ಪಡಿಸಬೇಕಿದ್ದು ಅದಕ್ಕಾಗಿ ಸರ್ವರೂ ಶ್ರಮಿಸಬೇಕಿದೆ ಎಂದರು.

ನಿಯೋಗದಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು, ಉಪಾಧ್ಯಕ್ಷ ಕೆ ಮುಹಮ್ಮದ್ ಪುತ್ತುಮೋನು ಕಿಲ್ಲೂರು, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಎಂ.ಎ ಕಾಸಿಂ ಮಲ್ಲಿಗೆಮನೆ ಕಿಲ್ಲೂರು, ಉರೂಸ್ ಸಮಿತಿ ಸದಸ್ಯರಾದ ಎಂ. ಅಬೂಬಕ್ಕರ್ ಮಲ್ಲಿಗೆಮನೆ ಕಿಲ್ಲೂರು ಮತ್ತು ಬದ್ರುದ್ದೀನ್ ಕಾಜೂರು ಇವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!