February 3, 2026

ಬಂಟ್ವಾಳ: ಮನೆ ಮೇಲೆ ಉರುಳಿದ ಬೃಹತ್ ಗಾತ್ರದ ಮರ:
ಮನೆಯೊಳಗೆ ಮಲಗಿದ್ದವರು ಅದೃಷ್ಟವಶಾತ್ ಪಾರು

0
Screenshot_20220715-171515_Chrome.jpg

ಬಂಟ್ವಾಳ: ಬೃಹತ್ ಮರವೊಂದು ಮನೆಯೊಂದರ ಮೇಲೆ ಬಿದ್ದ ಘಟನೆ ಶುಕ್ರವಾರ ಬೆಳಗ್ಗಿನ ಜಾವ ಮಾಣಿ-ಮೈಸೂರು‌ ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯೊಳಗೆ ಮಲಗಿದ್ದ ಮೂವರೂ ಅದೃಷ್ಟವಶಾತ್ ಪಾರಾಗಿದ್ದಾರೆ.

ಕೊಡಾಜೆಯ ಅಪಾಯಕಾರಿ‌ ತಿರುವಿನಲ್ಲಿರುವ ಸಂಜೀವ ಶೆಟ್ಟಿ ಎಂಬವರಿಗೆ ಸೇರಿದ ಮನೆಗೆ ಘಟನೆಯಿಂದ ಭಾರೀ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಮನೆಯಲ್ಲಿ ಬಾಡಿಗೆಗೆ ಇದ್ದ ಮೂವರು ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಮನೆಯ ಪಕ್ಕದಲ್ಲಿದ್ದ ಬೃಹತ್ ಮರ ಬೆಳಗಿನ‌ಜಾವ 3.30 ರ ಸುಮಾರಿಗೆ ಬಿದ್ದಿದ್ದು, ಬಿದ್ದ ರಭಸದ ತೀವ್ರತೆಗೆ ತೆಂಗಿನ ಮರವೊಂದು ಮುರಿದುಬಿದ್ದಿದೆ. ಮರದ ಗೆಲ್ಲುಗಳು ಹೆದ್ದಾರಿಯನ್ನೂ ಆವರಿಸಿದ ಹಿನ್ನೆಲೆಯಲ್ಲಿ ಸ್ವಲ್ಪ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮಾಣಿ ಗ್ರಾ. ಪಂ. ಸದಸ್ಯ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿಯವರು ಸ್ಥಳಕ್ಕೆ ತೆರಳಿದ್ದು, ಸ್ಥಳೀಯರ ನೆರವಿನೊಂದಿಗೆ ಬಿದ್ದಿದ್ದ ಮರದ ತೆರವಿಗೆ ಸಹಕರಿಸಿದರು.
ಘಟನೆಯಿಂದಾಗಿ ಮನೆಯ ಛಾವಣಿ ಗೋಡೆ ಹಾಗೂ ಸಿಟೌಟ್ ಗೆ ತೀವ್ರ ಹಾನಿಯಾಗಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!