ಮುಂಬೈ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ 4 ಕೋಟಿ ರೂಪಾಯಿ ಹೆರಾಯಿನ್ ವಶಪಡಿಸಿಕೊಂಡ ಎನ್‌ಸಿಬಿ:
ಒಬ್ಬನ ಬಂಧನ
ಮುಂಬೈ: ಸಹರ್ ಕಾರ್ಗೋ ಕಾಂಪ್ಲೆಕ್ಸ್‌ನಲ್ಲಿ ಕೊರಿಯರ್‌ನಿಂದ ವಶಪಡಿಸಿಕೊಂಡ 4 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್‌ಗೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗುರುವಾರ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ.
ಎನ್‌ಸಿಬಿ ಮುಂಬೈನ ತಂಡವು ಹೆರಾಯಿನ್ ಎಂದು ಹೇಳಲಾದ 700 ಗ್ರಾಂ ಬಿಳಿ ಬಣ್ಣದ ಪುಡಿಯನ್ನು ವಶಪಡಿಸಿಕೊಂಡಿದೆ. ನವೆಂಬರ್1 ರಂದು ಬಂದ ಮಾದಕ ದ್ರವ್ಯ ಹೊಂದಿರುವ ಕೊರಿಯರ್ ಮುಂಬೈನ ಸಹಾರ್ ಕಾರ್ಗೋ ಕಾಂಪ್ಲೆಕ್ಸ್‌ನ ಇಂಟರ್‌ನ್ಯಾಶನಲ್ ಕೊರಿಯರ್ ಟರ್ಮಿನಲ್‌ನಲ್ಲಿರುವ ಕಾನ್ಫರೆನ್ಸ್ ಹಾಲ್‌ನಲ್ಲಿ ವಶಪಡಿಸಲಾಗಿದೆ.
ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮಾತನಾಡಿ, ಪಾರ್ಸೆಲ್ ರವಾನೆದಾರ ಗುಜರಾತ್‌ನ ವಡೋದರಾ ನಿವಾಸಿ ಕೃಷ್ಣ ಮುರಾರಿ ಪ್ರಸಾದ್ ಎಂಬಾತನ ಹೇಳಿಕೆಯನ್ನು ನವೆಂಬರ್ 3 ರಂದು ಗುಜರಾತ್‌ನ ವಡೋದರಾದಲ್ಲಿ ದಾಖಲಿಸಲಾಗಿದೆ.
“ಹೆಚ್ಚಿನ ತನಿಖೆಗಾಗಿ, ಕೃಷ್ಣ ಮುರಾರಿ ಪ್ರಸಾದ್ ಅವರಿಗೆ ನೋಟಿಸ್ ನೀಡಲಾಗಿದೆ ಮತ್ತು ಗುರುವಾರ ಎನ್ಸಿಬಿ ಮುಂಬೈ ಕಚೇರಿಗೆ ಕರೆಸಲಾಯಿತು. ವಿಚಾರಣೆಗೆ ಒಳಪಡಿಸಿ ನಂತರ ಬಂಧಿಸಲಾಯಿತು” ಎಂದು ವಾಂಖೆಡೆ ಹೇಳಿದರು.
ಪ್ರಸಾದ್ ಅವರನ್ನು ಶುಕ್ರವಾರ ಮಧ್ಯಾಹ್ನ ಮುಂಬೈನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು, ಅಲ್ಲಿ ಎನ್‌ಸಿಬಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆಯಲಿದ್ದಾರೆ.
ವಶಪಡಿಸಿಕೊಂಡ ಹೆರಾಯಿನ್ ಉತ್ತಮ ಗುಣಮಟ್ಟದ್ದಾಗಿದ್ದು, ಅಫ್ಘಾನಿಸ್ತಾನದಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.





