ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಸ್ನೇಹಿತರು ಮೃತ್ಯು
ಬೆಂಗಳೂರು: ಬಿಡದಿ ಬಳಿಯ ಹೊರವಲಯದ ಕೃಷಿ ಹೊಂಡದಲ್ಲಿ ಸ್ನೇಹಿತನೊಂದಿಗೆ ಈಜಲು ಹೋಗಿದ್ದ ಎಚ್‌ಎಸ್‌ಆರ್ ಲೇಔಟ್ ನಿವಾಸಿ 29 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್ ನಿವಾಸಿ ಶೃತಿ ಕುಮಾರ್ (30) ಮತ್ತು ಹರೀಶ್ (22) ಮೃತಪಟ್ಟವರು. ಶೃತಿ ಕುಮಾರ್ ತಮ್ಮ ನಾಲ್ವರು ಸ್ನೇಹಿತರೊಂದಿಗೆ ತೌಟನಹಳ್ಳಿಯ ಚಿಕ್ಕಪ್ಪನ ಮನೆಗೆ ಬಂದಿದ್ದರು.
ಮಧ್ಯಾಹ್ನ ಊಟದ ನಂತರ ಸ್ನೇಹಿತರೊಂದಿಗೆ ಗ್ರಾಮದ ಹೊರವಲಯದಲ್ಲಿ ಚಿಕ್ಕಪ್ಪನ ತೋಟದಲ್ಲಿದ್ದ ಕೃಷಿ ಹೊಂಡಕ್ಕೆ ಈಜಲು ತೆರಳಿದಾಗ ಈ ದುರಂತ ನಡೆದಿದೆ. ಭಾನುವಾರದ ರಜೆ ಕಳೆಯಲು ಬೆಂಗಳೂರಿನಿಂದ ಬಂದಿದ್ದರು. ಇವರೆಲ್ಲರೂ ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ.
ಬೋರೇಗೌಡ ಎಂಬುವರಿಗೆ ಸೇರಿದ 15 ಅಡಿ ಆಳದ ಹೊಂಡದಲ್ಲಿ ವೈರ್ ಆಸರೆ ಪಡೆದು ಇಬ್ಬರು ಈಜುತ್ತಿದ್ದರು. ವೈರ್ ಕಟ್ ಆದ ಕಾರಣ ಇಬ್ಬರೂ ಮುಳುಗಲು ಪ್ರಾರಂಭಿಸಿದರು, ಅವರ ಜೊತೆಗಿದ್ದ ಇತರರು ಅವರನ್ನು ರಕ್ಷಿಸಲು ನೆರೆಹೊರೆಯವರ ಸಹಾಯ ಪಡೆಯಲು ಓಡಿ ಹೋಗಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ದುರಂತ ಸಂಭವಿಸಿತ್ತು.
ಅವಿವಾಹಿತ ಶ್ರುತಿಕುಮಾರ್ ಕುಡಿತಕ್ಕೆ ದಾಸನಾಗಿದ್ದ. ಪ್ರತಿ ವಾರಾಂತ್ಯದಲ್ಲಿ ತನ್ನ ಸ್ನೇಹಿತರೊಂದಿಗೆ ನಗರದ ಹೊರವಲಯದಲ್ಲಿರುವ ಚಿಕ್ಕಮ್ಮನ ಫಾರ್ಮ್‌ಹೌಸ್‌ಗೆ ಹೋಗಿ ಭಾನುವಾರ ರಾತ್ರಿ ವಾಪಸಾಗುತ್ತಿದ್ದ. ಇವರಿಗೆ ಈಜು ಬರುತ್ತಿರಲಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.