ಹತ್ಯೆಗೆ ಯತ್ನ ಮತ್ತು ದ್ವೇಷ ಹರಡಿದ ಪ್ರಕರಣ:
ಕೇರಳದಲ್ಲಿ ‘ನೋ-ಹಲಾಲ್’ ಹೋಟೆಲ್ ನಡೆಸುತ್ತಿರುವ ಮಾಲೀಕರ ಬಂಧನ
ಕೊಚ್ಚಿ: ‘ನೋ-ಹಲಾಲ್’ ಹೋಟೆಲ್ ನಡೆಸುತ್ತಿರುವ ಕೇರಳದ ದಂಪತಿಯನ್ನು ಪೊಲೀಸರು, ಇಬ್ಬರು ಕೆಫೆ ಮಾಲೀಕರನ್ನು ಕೊಲೆ ಮಾಡಲು ಯತ್ನಿಸಿದ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಕೋಮು ದ್ವೇಷವನ್ನು ಹರಡಿದ ಆರೋಪದಲ್ಲಿ ಬಂಧಿಸಿದ್ದಾರೆ.
ತುಷಾರ ಕಲ್ಲಾಯಿಲ್ ಮತ್ತು ಆಕೆಯ ಪತಿ ಅಜಿತ್ ಎಂದು ಗುರುತಿಸಲಾದ ದಂಪತಿಗಳು ಇನ್ಫೋಪಾರ್ಕ್ ಬಳಿ ಕೊಚ್ಚಿಯ ಕಾಕ್ಕನಾಡ್‌ನಲ್ಲಿರುವ ಕೆಫೆಯೊಂದರ ಮಾಲೀಕರಾದ ಬಿನೋಜ್ ಮತ್ತು ನಕುಲ್ ಅವರನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನೋ ಹಲಾಲ್ ಬೋರ್ಡ್ ಹಾಕಿ ತಮ್ಮ ಹೋಟೆಲ್ ನಲ್ಲಿ ಹಂದಿ ಮಾಂಸ ಬಡಿಸಿದ್ದಕ್ಕೆ ಆಕ್ರೋಶಗೊಂಡ ಜನರ ಗುಂಪೊಂದು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ತುಷಾರ ಫೇಸ್ ಬುಕ್ ನಲ್ಲಿ ಲೈವ್ ವಿಡಿಯೋ ಹಾಕಿದ್ದರು. ತುಷಾರ ಅವರು ಗಾಯಗೊಂಡು ಆಸ್ಪತ್ರೆಯಲ್ಲಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿತ್ತು. ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಸೇರಿದಂತೆ ಹಲವು ರಾಜಕೀಯ ಮುಖಂಡರು ದಂಪತಿಗೆ ಬೆಂಬಲವಾಗಿ ನಿಂತರು.
ಅಜಿತ್‌ನ ಸಹಚರ ಎಂದು ಗುರುತಿಸಲಾದ ಅಪ್ಪು ಕೆಫೆ ಮಾಲೀಕರಾದ ಬಿನೋಜ್ ಮತ್ತು ನಕುಲ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಕೆಫೆ ಮಾಲೀಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಫೆ ಮಾಲೀಕರು ಈಗ ಆಸ್ಪತ್ರೆಯಲ್ಲಿದ್ದು, ಅವರಲ್ಲಿ ಒಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ನಂತರ ತುಷಾರ ಫೇಸ್‌ಬುಕ್‌ನಲ್ಲಿ ಹಂದಿ ಮಾಂಸ ಬಡಿಸಿದ್ದಕ್ಕಾಗಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿಕೊಂಡು ಲೈವ್ ಬಂದಿದ್ದರು. ಈ ಘಟನೆಗೆ ಕೋಮುವಾದದ ಕೋನ ನೀಡಲು ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಕೆಫೆ ಮಾಲೀಕರ ದೂರಿನ ಮೇರೆಗೆ ಪೊಲೀಸರು ತುಷಾರ ಹಾಗೂ ಆಕೆಯ ಸಹಚರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ ಬಳಿಕ ತಲೆಮರೆಸಿಕೊಂಡಿದ್ದ ತುಷಾರ, ಅಜಿತ್ ಮತ್ತು ಅಪ್ಪು ಅವರನ್ನು ಕೊಟ್ಟಾಯಂ ಜಿಲ್ಲೆಯಿಂದ ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಎರಡು ಪ್ರಕರಣಗಳು ಕೊಲೆ ಯತ್ನ ಪ್ರಕರಣ ಮತ್ತು ಇನ್ನೊಂದು ಫೇಸ್‌ಬುಕ್ ಮೂಲಕ ಮತೀಯವಾದವನ್ನು ಹರಡಲು ಯತ್ನಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





