ಗುರುಗ್ರಾಮ್: ಮುಸ್ಲಿಮರಿಗೆ ನಮಾಝ್ ಮಾಡಲು ಗೊತ್ತುಪಡಿಸಿದ 8 ಸ್ಥಳಗಳ ಅನುಮತಿ ವಾಪಸ್
ದೆಹಲಿ: ಗುರುಗ್ರಾಮ್ ಆಡಳಿತವು ಮುಸ್ಲಿಂ ಬಾಂಧವರಿಗೆ ನಮಾಜ್ ಮಾಡಲು ಗೊತ್ತುಪಡಿಸಿದ 37 ಸ್ಥಳಗಳ ಪೈಕಿ ಎಂಟರಲ್ಲಿ ಸ್ಥಳೀಯರ ವಿರೋಧದಿಂದ ಮಂಗಳವಾರ ಅನುಮತಿ ವಾಪಸ್ ಪಡೆದಿದೆ.
ಗುರುಗ್ರಾಮ್ ಜಿಲ್ಲಾಡಳಿತದ ಅಧಿಕೃತ ಹೇಳಿಕೆಯ ಪ್ರಕಾರ, ಸ್ಥಳೀಯ ಜನರು ಮತ್ತು ಆರ್‌ಡಬ್ಲ್ಯೂಎಯಿಂದ ಆಕ್ಷೇಪಣೆ ಬಂದಿರುವ ಕಾರಣ ಅನುಮತಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
ಸೆಕ್ಟರ್ 49 ರಲ್ಲಿ ಬೆಂಗಾಲಿ ಬಸ್ತಿ, ಡಿಎಲ್‌ಎಫ್ ಹಂತ -3 ರ ವಿ ಬ್ಲಾಕ್, ಸೂರತ್ ನಗರ ಹಂತ -1, ಖೇರ್ಕಿ ಮಜ್ರಾ ಗ್ರಾಮದ ಹೊರವಲಯ, ದ್ವಾರಕಾ ಎಕ್ಸ್‌ಪ್ರೆಸ್‌ವೇ ಬಳಿಯ ದೌಲತಾಬಾದ್ ಗ್ರಾಮದ ಹೊರವಲಯ, ಸೆಕ್ಟರ್ 68 ರ ರಾಮಗಢ ಗ್ರಾಮದ ಬಳಿ, ಡಿಎಲ್‌ಎಫ್ ಸ್ಕ್ವೇರ್ ಟವರ್ ಬಳಿ ಮತ್ತು ರಾಂಪುರ ಗ್ರಾಮದಿಂದ ನಖ್ರೋಲಾ ರಸ್ತೆ. ಈ ಎಂಟು ಸ್ಥಳಗಳಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಆದೇಶಿಸಿದೆ.
“ಯಾವುದೇ ಮಸೀದಿ, ಈದ್ಗಾ ಅಥವಾ ಖಾಸಗಿ ಅಥವಾ ಗೊತ್ತುಪಡಿಸಿದ ಸ್ಥಳದಲ್ಲಿ ನಮಾಜ್ ಮಾಡಬಹುದು. ಆದರೆ, ಯಾವುದೇ ಸಾರ್ವಜನಿಕ ಮತ್ತು ತೆರೆದ ಸ್ಥಳದಲ್ಲಿ ನಮಾಜ್ ಮಾಡಲು ಆಡಳಿತದ ಒಪ್ಪಿಗೆ ಅಗತ್ಯ. ಒಂದು ವೇಳೆ ಸ್ಥಳೀಯ ಜನರು ಇತರ ಸ್ಥಳಗಳಲ್ಲಿ ನಮಾಜ್ ಮಾಡಲು ಆಕ್ಷೇಪಣೆ ವ್ಯಕ್ತಪಡಿಸಿದರೆ, ಅಲ್ಲಿಯೂ ನಮಾಜ್ ಮಾಡಲು ಅನುಮತಿ ನೀಡಲಾಗುವುದಿಲ್ಲ” ಎಂದು ಆಡಳಿತ ಹೇಳಿದೆ.