‘ಜೈ ಶ್ರೀರಾಮ್’ ಘೋಷಣೆ ಕೂಗಲು ನಿರಾಕರಣೆ:
ಬಟ್ಟೆ ವ್ಯಾಪಾರಿಗೆ ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆ

ಉತ್ತರ ಪ್ರದೇಶ: ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ, ಬಟ್ಟೆ ಮಾರುತ್ತಿದ್ದ ವ್ಯಕ್ತಿಯೊಬ್ಬ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲು ನಿರಾಕರಿಸಿದ್ದಕ್ಕಾಗಿ ಅವರನ್ನು, ಬಜರಂಗದಳದ ಕಾರ್ಯಕರ್ತರಿಬ್ಬರು ಲಾಠಿಯಿಂದ ತಳಿಸಿ, ಮತೀಯ ಗೂಂಡಾಗಿರಿ ನಡೆಸಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಲಿಗಡದಲ್ಲಿ ಭಾನುವಾರ ಸಂಜೆ ನಡೆದಿದೆ.
ಅಮೀರ್ ಖಾನ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಜೆ.ಎನ್. ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದೆ. ಘಟನೆ ನಂತರ ಆರೋಪಿಗಳಾದ ಬಜರಂಗದಳದ ಕಾರ್ಯಕರ್ತರಾದ ತಂದೆ ಮತ್ತು ಮಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆಲಿಗಡದ ಹರ್ದುವಾಗಂಜ್‌ನ ನಿವಾಸಿ ಅಮೀರ್ ಖಾನ್ ಬೀದಿ ಬದಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದು, ಭಾನುವಾರ ಸಂಜೆ ಮನೆಗೆ ಹೋಗುವ ದಾರಿಯಲ್ಲಿ ನಾಗ್ಲಾ ಖೇಮ್ ಪ್ರದೇಶದಲ್ಲಿ ಗ್ರಾಹಕರಿಗೆ ಬಟ್ಟೆ ತೋರಿಸುತ್ತಿದ್ದರು.
ಆ ಸ್ಥಳಕ್ಕೆ ಧಾವಿಸಿದ ಆರೋಪಿಗಳಿಬ್ಬರು, ವ್ಯಾಪಾರಿಯ ಬಳಿ ಹೋಗಿ ಅವರ ಹೆಸರು ಕೇಳಿದ್ದಾರೆ. ಅಮೀರ್ ಮುಸ್ಲಿಂ ಎಂದು ತಿಳಿದ ನಂತರ, ಇಬ್ಬರು ಅಮೀರ್ ಅವರನ್ನು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ.
ಸಂತ್ರಸ್ತ ಹೇಳುವಂತೆ, ಆರೋಪಿಗಳಿಬ್ಬರು ಕ್ಯಾಲೆಂಡರ್ ಒಂದನ್ನು ಕೈಯಲ್ಲಿ ಹಿಡಿದು, ಅದರಲ್ಲಿರುವ ದೇವರ ಫೋಟೊದ ಪಾದಗಳನ್ನು ಮುಟ್ಟುವಂತೆ ಹೇಳಿದ್ದಾರೆ. ಇದಲ್ಲದೇ ಆರೋಪಿಗಳು ಅಮೀರ್ ಅವರ ಬೈಕ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.