ಹಾನಗಲ್‌ನಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಹಿನ್ನೆಲೆ:
ಕಾಂಗ್ರೆಸ್ ಗೆದ್ದು ಮತ್ತೆ ಆಡಳಿತ ಸೂತ್ರವನ್ನು ಹಿಡಿಯಲಿದೆ ಎಂದ ಡಿ.ಕೆ.ಶಿ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತದಾರರ ವಿಶ್ವಾಸವನ್ನು ಕಳೆದುಕೊಂಡಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಮತ್ತೆ ಆಡಳಿತ ಸೂತ್ರವನ್ನು ಹಿಡಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಸಿಂಧಗಿಯಲ್ಲಿ ಹಿಂದೆ ಮೂರನೇ ಸ್ಥಾನದಲ್ಲಿ ಇದ್ದೆವು. ಈಗ ನಾವು ಎರಡನೇ ಸ್ಥಾನಕ್ಕೆ ಬಂದಿದ್ದು, ಹಿಂದಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಇಲ್ಲಿ ಸೋತರೂ ಸಮಾಧಾನವಿದೆ. ಆದರೆ, ಹಾನಗಲ್‌ನಲ್ಲಿ ಜಯಗಳಿಸಿದ್ದೇವೆ. ಬಿಜೆಪಿ ತೆಕ್ಕೆಯಲ್ಲಿ ಇದ್ದ ಕ್ಷೇತ್ರವನ್ನು ಗೆದ್ದಿದ್ದೇವೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ರಾಜ್ಯದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ. ಅದು ಎರಡೂ ಕ್ಷೇತ್ರಗಳ ಫಲಿತಾಂಶಗಳಲ್ಲಿ ವ್ಯಕ್ತವಾಗಿರುವ ಅಂಶ. ಹಾನಗಲ್‌ನಲ್ಲಿ ಮುಖ್ಯಮಂತ್ರಿ, ಅವರ ಅಳಿಯ, ಇಡೀ ಮಂತ್ರಿ ಮಂಡಲ ಹೋಗಿದ್ದರೂ ಅವರು ಅಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಸ್ವಾಭಿಮಾನಿ ಜನತೆ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಮತದಾರರು ಬಿಜೆಪಿ ಮೇಲೆ ವಿಶ್ವಾಸ ಕಳೆದುಕೊಂಡಿರುವುದಕ್ಕೆ ಇದು ಸಾಕ್ಷಿ ಎಂದು ಶಿವಕುಮಾರ್ ಹೇಳಿದರು.
ಮತದಾರರು ಕಾಂಗ್ರೆಸ್ ಕಡೆಗೆ ವಿಶ್ವಾಸ ಮತ್ತು ನಂಬಿಕೆಯಿಂದ ನೋಡುತ್ತಿದ್ದಾರೆ. ಅವರ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಬಿಜೆಪಿ ಆಡಳಿತದಲ್ಲಿ ಕರ್ನಾಟಕ 20 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ಅದನ್ನು ವಾಪಸ್ ತರುವ ಕೆಲಸ ಆಗಬೇಕಾಗಿದೆ. ಕರ್ನಾಟಕ ಬೆಳಕು ಕಾಣಲಿದೆ ಎಂದರು.
ಹಾನಗಲ್‌ನಲ್ಲಿ ಬಿಜೆಪಿಯ ಸೋಲು ಮುಖ್ಯಮಂತ್ರಿಗೆ ಆದ ಹಿನ್ನಡೆ ಎನ್ನುವುದಕ್ಕಿಂತ ಬಿಜೆಪಿಗೆ ಆಗಿರುವ ಮುಖಭಂಗ. ಯಡಿಯೂರಪ್ಪ ಅವರ ಕಣ್ಣೀರಿನಿಂದ ಬಿಜೆಪಿ ಪಕ್ಷ ಮುಂದಿನ ಚುನಾವಣೆಯಲ್ಲಿ ಕೊಚ್ಚಿ ಹೋಗಲಿದೆ ಎಂಬ ನನ್ನ ಮಾತಿಗೆ ಬದ್ಧನಾಗಿದ್ದೇನೆ ಎಂದೂ ಅವರು ಹೇಳಿದರು.