ತಾಳಿ ಕಟ್ಟುವ ವೇಳೆ ವಿದ್ಯುತ್ ಕಟ್: ಅಕ್ಕ-ತಂಗಿಯ ಗಂಡಂದಿರು ಅದಲು ಬದಲು
ಭೋಪಾಲ್: ತಾಳಿ ಕಟ್ಟುವ ವೇಳೆ ವಿದ್ಯುತ್ ಕೈಕೊಟ್ಟ ಪರಿಣಾಮ ಅಕ್ಕ-ತಂಗಿಯ ಗಂಡಂದಿರು ಅದಲು ಬದಲಾದ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ರಮೇಶ್‌ಲಾಲ್ ಅವರ ಪುತ್ರಿಯರಾದ ನಿಖೀತಾ ಮತ್ತು ಕರೀಶ್ಮಾಗೆ ದಂಗ್ವಾರಾ ಭೋಲಾ ಮತ್ತು ಗಣೇಶ್‌ರೊಂದಿಗೆ ಮದುವೆ ನಿಶ್ಚಯವಾಗಿತ್ತು. ವರರಿಬ್ಬರೂ ಬೇರೆ ಬೇರೆ ಊರಿನವರು.
ಇವರ ಮದುವೆಯ ಮುಹೂರ್ತ ರಾತ್ರಿ ವೇಳೆ ಇದ್ದು, ತಾಳಿ ಕಟ್ಟುವ ವೇಳೆಗೆ ವಿದ್ಯುತ್ ಹೋಗಿದೆ. ಇಬ್ಬರೂ ವಧುಗಳು ಒಂದೇ ರೀತಿಯ ಬಟ್ಟೆ ತೊಟ್ಟ ಕಾರಣ ಕತ್ತಲಿನಲ್ಲಿ ಯಾವ ವಧುವಿಗೆ ಯಾವ ವರ ತಾಳಿ ಕಟ್ಟಬೇಕು ಎಂದು ತಿಳಿಯದೆ ಅಚಾತುರ್ಯ ನಡೆದು ಹೋಗಿದೆ. ಅಕ್ಕನನ್ನು ವರಿಸಬೇಕಾದ ವರ ತಂಗಿಗೆ, ತಂಗಿಯನ್ನು ವರಿಸಬೇಕಾದ ವರ ಅಕ್ಕನಿಗೆ ತಾಳಿ ಕಟ್ಟಿದ್ದಾರೆ.
ಆದರೆ ವರರಿಬ್ಬರೂ ತಮ್ಮ ಪತ್ನಿಯರನ್ನು ಮನೆಗೆ ಕರೆದೊಯ್ದ ಬಳಿಕ ಅದಲು ಬದಲಾದ ವಿಚಾರ ಗಮನಕ್ಕೆ ಬಂದಿದೆ.
ಅಚಾತುರ್ಯ ಘಟಿಸಿದ್ದರಿಂದ ಮನೆ ಮಂದಿ ಚಿಂತಿತರಾಗಿ ಮರು ದಿನವೇ ಕುಳಿತು ಮಾತುಕತೆ ನಡೆಸಿದ್ದಾರೆ. ಆ ಬಳಿಕ ನಿಶ್ಚಯಗೊಂಡ ವರರೊಂದಿಗೆ ಅಕ್ಕ-ತಂಗಿಗೆ ಮತ್ತೊಮ್ಮೆ ಮದುವೆ ಮಾಡಿ ಇಬ್ಬರನ್ನು ಅವರವರ ಗಂಡಂದಿರ ಮನೆಗೆ ಕಳುಹಿಸುವ ಮೂಲಕ ಪ್ರಕರಣ ಸುಖಾಂತ್ಯವಾಗಿದೆ.




