ಉಡುಪಿ: ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಬಳಿಕ 2 ಆಡಿಯೋ ವೈರಲ್
ಉಡುಪಿ: ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್‌ಸ್ಟೆಬಲ್ ರಾಜೇಶ್ ಕುಂದರ್ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಗುತ್ತಿದ್ದು, ಡೆತ್ ನೋಟ್ ಬಳಿಕ ಇದೀಗ ಆತ್ಮಹತ್ಯೆಗೈದ ರಾಜೇಶ್ ಕುಂದರ್ ಸಾವಿಗೆ ಇಲಾಖಾ ದೌರ್ಜನ್ಯವೇ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ರಾಜೇಶ್ ಕುಂದರ್ ಮಾತನಾಡಿದರೆನ್ನಲಾದ 2 ಆಡಿಯೋ ವೈರಲ್ ಆಗಿದೆ.
ಮೊದಲ ಆಡಿಯೋದಲ್ಲಿ ಹಿಜಾಬ್ ಗಲಾಟೆ ಸಂದರ್ಭ ರಾಜೇಶ್ ಕುಂದರ್ ಗಂಗೊಳ್ಳಿ ಠಾಣೆಗೆ ಕ್ಷಿಪ್ರ ದಾಳಿ ಪಡೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು. ಅವರ ಕೈಕೆಳಗೆ ಅಶ್ಪಕ್ ಮತ್ತು ಉಮೇಶ್ ಎಂಬವರು ನಿಯೋಜಿತರಾಗಿದ್ದರು. ಆದರೆ ಅವರು ಹೇಳದೆ-ಕೇಳದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಬಗ್ಗೆ ರಾಜೇಶ್ ಕುಂದರ್ ಅವರು ಡಿಎಆರ್ ಹೆಡ್ ಕ್ವಾರ್ಟರ್‌ಗೆ ಕರೆ ಮಾಡಿ ದೂರು ನೀಡಿದ್ದಾರೆ.
ಎರಡನೇ ಆಡಿಯೋದಲ್ಲಿ ದೂರು ನೀಡಿದ್ದಕ್ಕೆ ಮೇಲೆ ಅಶ್ಪಕ್ ಮತ್ತು ಉಮೇಶ್ ಅವರು ರಾಜೇಶ್ ಕುಂದರ್ ಮೇಲೆ ಹಲ್ಲೆ ನಡೆಸಿ ಶರ್ಟ್ ಹರಿದು ಹಾಕಿದ್ದರು. ಅವರಿಂದ ತಪ್ಪಿಸಿಕೊಂಡು ವಾಹನ ಇಲ್ಲದೆ ಬರಿ ಮೈಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಡಿಎಆರ್ ಡಿವೈಎಸ್ಪಿ ಮತ್ತು ಗಂಗೊಳ್ಳಿ ಎಸ್ಐಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿ ಬಳಿ ಗೋಗರೆಯುತ್ತಾರೆ. ಜೊತೆಗೆ ಈ ಕಾಲ್ ಅನ್ನು ರೆಕಾರ್ಡ್ ಮಾಡುತ್ತಿದ್ದೇನೆ ಎನ್ನುವ ಅವರು ತನಗೆ ಸಹಾಯ ಮಾಡದಿದ್ದರೆ ಇನ್ಸಿಡೆಂಟ್ (ಆತ್ಮಹತ್ಯೆ) ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಸುತ್ತಾರೆ.
ಜಗಳದ ಹಿನ್ನೆಲೆಯಲ್ಲಿ ರಾಜೇಶ್ ಕುಂದರ್ ಸಹಿತ ಇಬ್ಬರನ್ನು ಅಮಾನತು ಮಾಡಲಾಗಿತ್ತು. ಅಮಾನತು ಮಾಡಿದ್ದರಿಂದ ಅವಮಾನಿತರಾದ ರಾಜೇಶ್ ತನಗಾದ ನೋವನ್ನ ಡೆತ್ ನೋಟ್ ನಲ್ಲಿ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಸಾವಿಗೆ ಪ್ರಚೋದನೆ ನೀಡಿದ ಹಿನ್ನೆಲೆ ಗಂಗೊಳ್ಳಿ ಠಾಣಾ ಎಸ್‌ಐ ಸಹಿತ ಮೂವರು ಪೊಲೀಸರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಕೇಸು ದಾಖಲು ಮಾಡಲಾಗಿದೆ. ತನಿಖೆ ನಡೆಯುತ್ತಿದೆ. ಪೊಲೀಸರು ಸದ್ಯ ಆಡಿಯೋಗಳನ್ನು ಪರಿಶೀಲಿಸುತ್ತಿದ್ದು, ಅದರಲ್ಲಿರುವ ಧ್ವನಿ ರಾಜೇಶ್ ಅವರದ್ದೇ ಆಗಿರಬಹುದೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.




