ಜೋಧಪುರ: ಕೋಮು ಉದ್ವಿಗ್ನತೆ, ಕಲ್ಲು ತೂರಾಟ: ಇಂಟರ್ನೆಟ್ ಸೇವೆ ಸ್ಥಗಿತ
ಜೋಧಪುರ: ರಾಜಸ್ತಾನದ ಜೋಧ್‌ಪುರದಲ್ಲಿ ಎರಡು ಸಮುದಾಯಗಳ ನಡುವೆ ಕೋಮು ಉದ್ವಿಗ್ನತೆ ಉಂಟಾಗಿದ್ದು, ಕಲ್ಲು ತೂರಾಟ ನಡೆದಿದೆ. ಜೋಧ್‌ಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ನಿನ್ನೆ ಸಂಜೆಯಿಂದ ಉಂಟಾದ ಗಲಾಟೆ ರಾತ್ರಿ ವೇಳೆ ವಿಕೋಪಕ್ಕೆ ತಿರುಗಿತ್ತು. ಇದೇ ಗಲಾಟೆಯಲ್ಲಿ ಇಂದು ಮುಂಜಾನೆ ಕನಿಷ್ಠ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ಈದ್ ಆಚರಣೆಗೆ ಕೆಲ ಗಂಟೆಗಳ ಮೊದಲು ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಶಾಂತಿ ಕಾಪಾಡುವಂತೆ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಜನರಿಗೆ ಮನವಿ ಮಾಡಿದ್ದಾರೆ.
ಈದ್ ಸಂದರ್ಭದಲ್ಲಿ ಧಾರ್ಮಿಕ ಧ್ವಜ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರದೇಶದಲ್ಲಿ ಭಾರೀ ಪೊಲೀಸ್ ಭದ್ರತೆ ಹೆಚ್ಚಿಸಗಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಯ ಮೂಲಗಳು ತಿಳಿಸಿವೆ.
ಈ ಘಟನೆ ದುರದೃಷ್ಟಕರ ಎಂದು ಹೇಳಿರುವ ಮುಖ್ಯಮಂತ್ರಿಗಳು, ಜನರು ಭ್ರಾತೃತ್ವವನ್ನು ಎತ್ತಿ ಹಿಡಿಯುವಂತೆ ಮನವಿ ಮಾಡಿದ್ದಾರೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಗೆಹಲೋಟ್ ಹೇಳಿದ್ದಾರೆ.