2008 ರ ಅತ್ಯಾಚಾರ ಪ್ರಕರಣ:
ಬಿಎಸ್ಪಿ ಮಾಜಿ ಶಾಸಕ ಯೋಗೇಂದ್ರ ಸಾಗರ್ ಗೆ ಜೀವಾವಧಿ ಶಿಕ್ಷೆ ಪ್ರಕಟ

ಉತ್ತರ ಪ್ರದೇಶ: 13 ವರ್ಷಗಳ ಹಿಂದೆ ವಿದ್ಯಾರ್ಥಿನಿಯೊಬ್ಬಳ ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಜನ ಸಮಾಜ ಪಕ್ಷದ (BSP) ಮಾಜಿ ಶಾಸಕ ಯೋಗೇಂದ್ರ ಸಾಗರ್‌ಗೆ ವಿಶೇಷ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ಮತ್ತು 30,000 ರೂಪಾಯಿ ದಂಡ ವಿಧಿಸಿದೆ.
ಏಪ್ರಿಲ್ 23, 2008 ರಂದು ಉತ್ತರ ಪ್ರದೇಶದ ಬಿಲ್ಸಿಯಿಂದ ಪದವಿಪೂರ್ವ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ, ನಂತರ ಅನೇಕ ಸಂದರ್ಭಗಳಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ನ್ಯಾಯಾಧೀಶ ಅಖಿಲೇಶ್ ಕುಮಾರ್ ಅವರು ಯೋಗೇಂದ್ರ ನನ್ನು ದೋಷಿ ಎಂದು ಘೋಷಿಸಿದ್ದಾರೆ ಎಂದು ಹೆಚ್ಚುವರಿ ಸರ್ಕಾರಿ ವಕೀಲ ಮದನ್‌ಲಾಲ್ ರಜಪೂತ್ ಹೇಳಿದರು.
ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದೇಶ ನೀಡಿದ ಬಳಿಕ ಮಾಜಿ ಶಾಸಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಅವರನ್ನು ವೈದ್ಯಕೀಯ ಮತ್ತು ಕೋವಿಡ್ ಪರೀಕ್ಷೆಗಳಿಗೆ ಕರೆದೊಯ್ಯಲಾಯಿತು.
ಯೋಗೇಂದ್ರ ಸಾಗರ್ ಅವರು ಸುಪ್ರೀಂ ಕೋರ್ಟ್ ನೀಡಿದ ಜಾಮೀನಿನ ಮೇಲೆ ಇಲ್ಲಿಯವರೆಗೆ ಹೊರಗಿದ್ದರು. ಘಟನೆಯ ಸಮಯದಲ್ಲಿ ಅವರು ಬುದೌನ್ ಜಿಲ್ಲೆಯ ಬಿಲ್ಸಿ ಕ್ಷೇತ್ರದಿಂದ ಬಿಎಸ್ಪಿ ಶಾಸಕರಾಗಿದ್ದರು.
ಸದ್ಯ ಯೋಗೇಂದ್ರ ಸಾಗರ್ ಭಾರತೀಯ ಜನತಾ ಪಾರ್ಟಿಯಲ್ಲಿದ್ದು, ಅವರ ಪುತ್ರ ಕುಶಾಗ್ರ ಸಾಗರ್ ಬಿಸೌಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ಪತ್ನಿ ಪ್ರೀತಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದಾರೆ.