ಶಾಂತಿ ಕಾಪಾಡಲು ಕ್ರಮ ಕೈಗೊಳ್ಳುವಂತೆ ತ್ರಿಪುರಾ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ತ್ರಿಪುರಾ: ಈ ವಾರದ ಆರಂಭದಲ್ಲಿ ಮಸೀದಿ, ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಿದ ನಂತರ ಪಾಣಿಸಾಗರದಲ್ಲಿ ಉದ್ವಿಗ್ನತೆಯನ್ನು ಶಮನಗೊಳಿಸಲು ತಾನು ಕೈಗೊಂಡ ಕ್ರಮಗಳು ಮತ್ತು ಅದರ ಯೋಜನೆಗಳ ಬಗ್ಗೆ ನವೆಂಬರ್ 10 ರೊಳಗೆ ಅಫಿಡವಿಟ್ ಸಲ್ಲಿಸುವಂತೆ ತ್ರಿಪುರಾ ಹೈಕೋರ್ಟ್ ಬಿಪ್ಲಬ್ ಕುಮಾರ್ ದೇಬ್ ಸರ್ಕಾರಕ್ಕೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಇಂದ್ರಜಿತ್ ಮಹಾಂತಿ ಮತ್ತು ನ್ಯಾಯಮೂರ್ತಿ ಸುಭಾಶಿಶ್ ತಾಲಪಾತ್ರ ಅವರನ್ನೊಳಗೊಂಡ ನ್ಯಾಯಾಲಯದ ವಿಭಾಗೀಯ ಪೀಠವು ಶುಕ್ರವಾರ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಕೈಗೆತ್ತಿಕೊಂಡಿತು ಮತ್ತು ಉತ್ತರ ತ್ರಿಪುರಾ ಜಿಲ್ಲೆಯಲ್ಲಿ ನಡೆದಂತಹ ವಿಧ್ವಂಸಕ ಕೃತ್ಯಗಳ ಕುರಿತು ನವೆಂಬರ್ 10 ರೊಳಗೆ ರಾಜ್ಯ ಸರ್ಕಾರದಿಂದ ವರದಿ ಕೇಳಿದೆ.
ನಕಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ಸಹ ನ್ಯಾಯಾಧೀಶರು ಸರ್ಕಾರದಿಂದ ವರದಿಯಲ್ಲಿ ಕೇಳಿದೆ.
ಹಿಂಸಾಚಾರದಲ್ಲಿ ಹಾನಿಗೊಳಗಾದ ಜನರಿಗೆ ಪರಿಹಾರವನ್ನು ನೀಡುವ ದೇಬ್ ಅವರ ಘೋಷಣೆಯನ್ನು ಹೈಕೋರ್ಟ್ ಗಮನಕ್ಕೆ ತೆಗೆದುಕೊಂಡಿತು ಮತ್ತು ಸಂತ್ರಸ್ತ ಜನರಿಗೆ ಪರಿಹಾರವನ್ನು ನೀಡಲು ತುರ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ.
ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಇತ್ತೀಚೆಗೆ ನಡೆದ ಹಿಂಸಾಚಾರದ ವಿರುದ್ಧ ಪ್ರತಿಭಟಿಸಲು ವಿಶ್ವ ಹಿಂದೂ ಪರಿಷತ್ ರ್ಯಾಲಿಯಲ್ಲಿ ಅಕ್ಟೋಬರ್ 26 ರಂದು ಸಂಜೆ ಉತ್ತರ ತ್ರಿಪುರಾ ಜಿಲ್ಲೆಯ ಪಾಣಿಸಾಗರ್ ಉಪವಿಭಾಗದ ಚಾಮ್ಟಿಲ್ಲಾ ಪ್ರದೇಶದಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದ್ದರು ಮತ್ತು ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ರಾಜ್ಯ ಪೊಲೀಸರ ಪ್ರಕಾರ, ಸಮೀಪದ ರೋವಾ ಬಜಾರ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಒಡೆತನದ ಮೂರು ಮನೆಗಳು ಮತ್ತು ಕೆಲವು ಅಂಗಡಿಗಳನ್ನು ಸಹ ದರೋಡೆ ಮಾಡಲಾಗಿದೆ.