ಟೆನಿಸ್ ತಾರೆ ಲಿಯಾಂಡರ್ ಪೇಸ್, ನಟಿ ನಫೀಸಾ ಅಲಿ ಟಿಎಂಸಿ ಪಕ್ಷಕ್ಕೆ ಸೇರ್ಪಡೆ

ಗೋವಾ: ದೇಶದ ಮಾಜಿ ಟೆನಿಸ್ ತಾರೆ ‘ಲಿಯಾಂಡರ್ ಆಡ್ರಿಯನ್ ಪೇಸ್’ ಅವರು ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ)ವನ್ನು ಸೇರಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಘೋಷಣೆಯನ್ನು ಶುಕ್ರವಾರ ಮಾಡಿದ್ದು, ಲಿಯಾಂಡರ್ ತನ್ನ ಕಿರಿಯ ಸಹೋದರನಿದ್ದಂತೆ ಎಂದು ಹೇಳಿದ್ದಾರೆ.
“ಲಿಯಾಂಡರ್ ಪೇಸ್ ಟಿಎಂಸಿಗೆ ಸೇರುತ್ತಾರೆ ಎಂದು ತಿಳಿಸಲು ಸಂತೋಷವಾಗಿದೆ. ನನಗೆ ತುಂಬಾ ಖುಷಿಯಾಗಿದೆ. ಅವನು ನನ್ನ ಕಿರಿಯ ಸಹೋದರ. ನಾನು ಸಚಿವನಾಗಿದ್ದಾಗಿನಿಂದಲೂ ಅವರನ್ನು ಬಲ್ಲೆ ಮತ್ತು ಅವರು ತುಂಬಾ ಚಿಕ್ಕವರಾಗಿದ್ದರು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನಟಿ ಮತ್ತು ಕಾರ್ಯಕರ್ತೆ ನಫೀಸಾ ಅಲಿ ಕೂಡ ಗೋವಾದಲ್ಲಿ ನಡೆದ ಅದೇ ಕಾರ್ಯಕ್ರಮದಲ್ಲಿ ಟಿಎಂಸಿಗೆ ಸೇರಿದ್ದಾರೆ. ಮಮತಾ ಬ್ಯಾನರ್ಜಿ ಅವರು ನಫೀಸಾ ಅಲಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಮುಂಬರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧಿಸಲಿದೆ ಎಂದು ಪಕ್ಷವು ಈಗಾಗಲೆ ಘೋಷಿಸಿದೆ. ಈ ಹಿನ್ನಲೆಯಲ್ಲಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಗುರುವಾರದಿಂದ ಮೂರು ದಿನದ ಗೋವಾ ಪ್ರವಾಸದಲ್ಲಿ ಇದ್ದಾರೆ.