ಸಂಪಾಜೆ: ಜ್ಯೋತಿಷಿ ಮನೆ ನುಗ್ಗಿ ದರೋಡೆ ಪ್ರಕರಣ, ನಾಲ್ವರು ಆರೋಪಿಗಳ ಬಂಧನ
ಸಂಪಾಜೆ: ಕಳೆದ ಕೆಲವು ದಿನಗಳ ಹಿಂದೆ ಸುಳ್ಯ ತಾಲೂಕನ್ನು ಬೆಚ್ಚಿಬೀಳಿಸಿದ್ದ ಸಂಪಾಜೆಯ ಜ್ಯೋತಿಷಿ ಅಂಬರೀಶ್ ಭಟ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಲ್ಲಿ ನಾಲ್ವರನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಮಿಳುನಾಡು ಮೂಲದ ಕಾರ್ತಿಕ್(38) ಹಾಗೂ ನರಸಿಂಹನ್(40) , ಹಾಸನ ಮೂಲದ ಯದುಕುಮಾರ್(33) ಹಾಗೂ ದೀಕ್ಷಿತ್ (26) ಎಂದು ಗುರುತಿಸಲಾಗಿದೆ. ಆರೋಪಿಳಿಂದ ನಗದು , ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಕೆಲವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆ ತನಿಖೆ ಚುರುಕುಗೊಳಿಸಿದ್ದಾರೆ.
ಸಂಪಾಜೆಯ ಚಟ್ಟೆಕಲ್ಲು ಎಂಬಲ್ಲಿ ಅಂಬರೀಶ್ ಭಟ್ ಎಂಬವರ ಮನೆಗೆ ನುಗ್ಗಿದ ದರೋಡೆಕೋರರು ಮಚ್ಚು ಹಿಡಿದು ಬೆದರಿಸಿ ಚಿನ್ನ ಹಾಗೂ ಸುಮಾರು 1.8 ಲಕ್ಷ ರೂಪಾಯಿ ದರೋಡೆ ನಡೆಸಿದ್ದರು.
ಸಂಪಾಜೆಯಲ್ಲಿ ಪೌರೋಹಿತ್ಯ ಹಾಗೂ ಜ್ಯೋತಿಷ್ಯ ಕಾರ್ಯದಲ್ಲಿ ತೊಡಗಿದ್ದ ಅಂಬರೀಶ್ ಅವರ ಮನೆಗೆ ಮಾ.20 ಭಾನುವಾರ ರಾತ್ರಿ ಸುಮಾರು 8.30 ರ ಹೊತ್ತಿಗೆ ನುಗ್ಗಿದ ದರೋಡೆಕೋರರು ಅಂಬರೀಶ್ ಅವರ ಸೊಸೆ ಹಾಗೂ ಪತ್ನಿಯನ್ನು ಬೆದರಿಸಿ ದರೋಡೆ ಮಾಡಿದ್ದರು. ಈ ಸಮಯದಲ್ಲಿ ಅಂಬರೀಶ್ ಭಟ್ ಹಾಗೂ ಅವರ ಪುತ್ರ ಮನೆಯಲ್ಲಿ ಇರಲಿಲ್ಲ.ಈ ಪ್ರಕರಣದ ಬಗ್ಗೆ ಅಂಬರೀಶ್ ಅವರ ಸೊಸೆ ಆಶಾ ಪೊಲೀಸರಿಗೆ ದೂರು ನೀಡಿದ್ದರು.





